ADVERTISEMENT

Champions Trophy Final | ನ್ಯೂಜಿಲೆಂಡ್ ಸವಾಲನ್ನು ಮೆಟ್ಟಿ ನಿಲ್ಲಬಹುದೇ ಭಾರತ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2025, 10:20 IST
Last Updated 8 ಮಾರ್ಚ್ 2025, 10:20 IST
<div class="paragraphs"><p>ಟೀಮ್ ಇಂಡಿಯಾ</p></div>

ಟೀಮ್ ಇಂಡಿಯಾ

   

(ಪಿಟಿಐ ಚಿತ್ರ)

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ನಾಳೆ (ಭಾನುವಾರ) ದುಬೈಯಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸವಾಲನ್ನು ಭಾರತ ಎದುರಿಸಲಿದೆ.

ADVERTISEMENT

ಈವರೆಗೆ ಆಡಿರುವ ಎಲ್ಲ ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿರುವ ರೋಹಿತ್ ಶರ್ಮಾ ಬಳಗವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.

ಆದರೆ ನ್ಯೂಜಿಲೆಂಡ್ ತಂಡವನ್ನು ಯಾವುದೇ ಹಂತದಲ್ಲೂ ಹಗುರವಾಗಿ ಪರಿಗಣಿಸುವಂತಿಲ್ಲ. 'ಎ' ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 44 ರನ್ ಅಂತರದ ಜಯ ಗಳಿಸಿತ್ತು.

249 ರನ್‌ಗಳ ಸಾಧಾರಣ ಮೊತ್ತ ಪೇರಿಸಿದ್ದರೂ ನ್ಯೂಜಿಲೆಂಡ್ ತಂಡವನ್ನು 205 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಈಗ ಅದೇ ಆತ್ಮವಿಶ್ವಾಸದೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.

ಒಟ್ಟಾರೆಯಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಐದನೇ ಸಲ ಫೈನಲ್‌ಗೆ ಲಗ್ಗೆ ಇಟ್ಟಿರುವ ಟೀಮ್ ಇಂಡಿಯಾ, ಮೂರನೇ ಸಲ ಕಪ್ ಗೆಲ್ಲುವ ಗುರಿ ಹೊಂದಿದೆ. 2002 ಹಾಗೂ 2013ರಲ್ಲಿ ಭಾರತ ಚಾಂಪಿಯನ್ ಆಗಿತ್ತು.

2000ನೇ ಇಸವಿಯಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಫೈನಲ್‌ನಲ್ಲಿ ಸೋತು ರನ್ನರ್ ಅಪ್ ಆಗಿತ್ತು. ಅಂಕಿಅಂಶಗಳನ್ನು ಗಮನಿಸಿದಾಗ ನ್ಯೂಜಿಲೆಂಡ್ ಸವಾಲನ್ನು ಮೀರಿ ನಿಲ್ಲುವುದು ಅಷ್ಟು ಸುಲಭವಲ್ಲ.

ತಂಡದೆಲ್ಲ ಆಟಗಾರರು ಉತ್ತಮ ಲಯದಲ್ಲಿರುವುದು ಟೀಮ್ ಇಂಡಿಯಾದ ಪರ ಧನಾತ್ಮಕ ಅಂಶವಾಗಿ ಪರಿಣಮಿಸಿದೆ. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್, ಅಗ್ರ ಬ್ಯಾಟಿಂಗ್ ವಿಭಾಗದಲ್ಲಿ ಬಲ ತುಂಬಲಿದ್ದಾರೆ.

ಕೆಳ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಉಪಯುಕ್ತ ಇನ್ನಿಂಗ್ಸ್ ಕಟ್ಟಲು ಸಜ್ಜಾಗಿದ್ದಾರೆ.

ಬೌಲಿಂಗ್ ವಿಭಾಗದಲ್ಲೂ ಹೆಚ್ಚಿನ ಬದಲಾವಣೆ ಕಂಡುಬರುವ ಸಾಧ್ಯತೆಯಿಲ್ಲ. ನಾಲ್ವರು ಸ್ಪಿನ್ನರ್‌ಗಳ ರಣತಂತ್ರದೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ವರುಣ್ ಚಕ್ರವರ್ತಿ, ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ಎದುರಾಳಿ ತಂಡಕ್ಕೆ ಕಡಿವಾಣ ಹಾಕುವ ನಿರೀಕ್ಷೆಯಲ್ಲಿದ್ದಾರೆ.

ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, ಮಗದೊಮ್ಮೆ ಮೋಡಿ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ನ್ಯೂಜಿಲೆಂಡ್ ತಂಡವು ಸಹ ಸಮತೋಲನದಿಂದ ಕೂಡಿದ್ದು, ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ವಿಕೆಟ್ ಕೀಪರ್ ಟಾಮ್ ಲೇಥಮ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್ ವಿಭಾಗದಲ್ಲಿ ಬಲ ತುಂಬಲಿದ್ದಾರೆ. ಹಾಗೆಯೇ ನಾಯಕ ಮಿಚೆಲ್ ಸ್ನಾಂಟನರ್, ಮೈಕಲ್ ಬ್ರೇಸ್‌ವೆಲ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್ ಹಾಗೂ ವಿಲಿಯಮ್ ಓರೂರ್ಕ್ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಎನಿಸಬಲ್ಲರು.

ಒಟ್ಟಿನಲ್ಲಿ ದುಬೈನ ಅಂತರರಾಷ್ಟ್ರೀಯ ಮೈದಾನದಲ್ಲಿ ಅಭಿಮಾನಿಗಳು ಮತ್ತೊಂದು ರೋಚಕ ಹಣಾಹಣಿಯ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.