ADVERTISEMENT

Champions Trophy: 25 ವರ್ಷಗಳ ಬಳಿಕ ಮತ್ತೆ ಭಾರತ vs ನ್ಯೂಜಿಲೆಂಡ್ ಫೈನಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2025, 9:51 IST
Last Updated 6 ಮಾರ್ಚ್ 2025, 9:51 IST
<div class="paragraphs"><p>ಟೀಮ್ ಇಂಡಿಯಾ</p></div>

ಟೀಮ್ ಇಂಡಿಯಾ

   

(ಪಿಟಿಐ ಚಿತ್ರ)

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ 25 ವರ್ಷಗಳ ಬಳಿಕ ಮತ್ತೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ.

ADVERTISEMENT

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಫೈನಲ್ ನಿಗದಿಯಾಗಿದೆ. ಟೂರ್ನಿಯ ಇತಿಹಾಸದಲ್ಲಿ ಎರಡನೇ ಸಲ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಅಂದ ಹಾಗೆ 25 ವರ್ಷಗಳ ಹಿಂದೆ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ ಅಂತರದ ಸೋಲನುಭವಿಸಿದ್ದ ಭಾರತದ ಟ್ರೋಫಿ ಕನಸು ಭಗ್ನಗೊಂಡಿತ್ತು.

ಫಲಿತಾಂಶ ಹೀಗಿತ್ತು...

2000ನೇ ಇಸವಿಯಲ್ಲಿ ನೈರೋಬಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನಾಯಕ ಸೌರವ್ ಗಂಗೂಲಿ ಶತಕದ (114) ಬಲದಿಂದ ಭಾರತ ಆರು ವಿಕೆಟ್ ನಷ್ಟಕ್ಕೆ 264 ರನ್ ಪೇರಿಸಿತ್ತು. ಸಚಿನ್ ತೆಂಡೂಲ್ಕರ್ 69 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದ್ದರು. ಸಚಿನ್ ಹಾಗೂ ಗಂಗೂಲಿ ಮೊದಲ ವಿಕೆಟ್‌ಗೆ 141 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ಆದರೆ ರಾಹುಲ್ ದ್ರಾವಿಡ್ (22), ಯುವರಾಜ್ ಸಿಂಗ್ (18), ವಿನೋದ್ ಕಾಂಬ್ಳಿ (1) ಹಾಗೂ ರಾಬಿನ್ ಸಿಂಗ್ (13) ವೈಫಲ್ಯ ಅನುಭವಿಸಿದ್ದರಿಂದ ಭಾರತ ಹಿನ್ನಡೆ ಅನುಭವಿಸಿತ್ತು.

ಈ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್, ಕ್ರಿಸ್ ಕೈರ್ನ್ಸ್ ಅಜೇಯ ಶತಕದ (102*) ನೆರವಿನಿಂದ 49.4 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು. ಕ್ರಿಸ್ ಹ್ಯಾರಿಸ್ (46) ಹಾಗೂ ನೇಥನ್ ಆಸ್ಟ್ಲೆ (37) ಉಪಯುಕ್ತ ಇನಿಂಗ್ಸ್ ಕಟ್ಟಿದ್ದರು.

ಭಾರತದ ಪರ ವೆಂಕಟೇಶ್ ಪ್ರಸಾದ್ ಮೂರು ಮತ್ತು ಅನಿಲ್ ಕುಂಬ್ಳೆ ಎರಡು ವಿಕೆಟ್ ಗಳಿಸಿದ್ದರು. ಆದರೆ ಕೊನೆಯ ಓವರ್‌ನಲ್ಲಿ ಗೆಲುವಿನ ಗಡಿ ದಾಟಿದ್ದ ನ್ಯೂಜಿಲೆಂಡ್ ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಮತ್ತೊಂದೆಡೆ ಚೊಚ್ಚಲ ಪ್ರಶಸ್ತಿ ಗೆಲ್ಲುವ ಭಾರತದ ಕನಸು ಭಗ್ನಗೊಂಡಿತ್ತು.

2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲೂ ಸೋಲು...

ಒಟ್ಟಾರೆಯಾಗಿ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಎರಡು ಸಲ ನ್ಯೂಜಿಲೆಂಡ್ ತಂಡದ ಸವಾಲನ್ನು ಭಾರತ ಎದುರಿಸಿದೆ. ಆದರೆ ಎರಡೂ ಸಲವೂ ಭಾರತಕ್ಕೆ ಸೋಲು ಎದುರಾಗಿತ್ತು.

2021ರಲ್ಲಿ ಸೌಂಥಪ್ಟನ್‌ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲೂ ಭಾರತದ ವಿರುದ್ಧ ಎಂಟು ವಿಕೆಟ್ ಅಂತರದ ಜಯ ಗಳಿಸಿದ್ದ ನ್ಯೂಜಿಲೆಂಡ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲೂ ಭಾರತದ ಚೊಚ್ಚಲ ಪ್ರಶಸ್ತಿ ಕನಸು ಭಗ್ನಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.