ADVERTISEMENT

ಕುಟುಂಬದ ಸದಸ್ಯರ ಪ್ರಯಾಣ ಇಲ್ಲ: ಸಿಎಸ್‌ಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:14 IST
Last Updated 1 ಆಗಸ್ಟ್ 2020, 16:14 IST
ಹೋದ ವರ್ಷದ ಟೂರ್ನಿಯ ಪಂದ್ಯದಲ್ಲಿ ವಿಐಪಿ ಗ್ಯಾಲರಿಯಲ್ಲಿದ್ದ ಮಹೇಂದ್ರಸಿಂಗ್ ಧೋನಿಯವರ ಪತ್ನಿ ಸಾಕ್ಷಿ ಸಿಂಗ್, ಮಗಳು ಜೀವಾ – ಎಎಫ್‌ಪಿ ಚಿತ್ರ
ಹೋದ ವರ್ಷದ ಟೂರ್ನಿಯ ಪಂದ್ಯದಲ್ಲಿ ವಿಐಪಿ ಗ್ಯಾಲರಿಯಲ್ಲಿದ್ದ ಮಹೇಂದ್ರಸಿಂಗ್ ಧೋನಿಯವರ ಪತ್ನಿ ಸಾಕ್ಷಿ ಸಿಂಗ್, ಮಗಳು ಜೀವಾ – ಎಎಫ್‌ಪಿ ಚಿತ್ರ   

ಚೆನ್ನೈ: ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿ ಈ ಬಾರಿ ಐಪಿಎಲ್ ನಡೆಯುವುದು ಬಹುತೇಕ ಖಚಿತವಾಗಿದೆ. ಟೂರ್ನಿಗೆ ತೆರಳಲಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಟಗಾರರು ತಮ್ಮ ಕುಟುಂಬದ ಸದಸ್ಯರನ್ನು ಕರೆದೊಯ್ಯದಿರಲು ನಿರ್ಧರಿಸಿದ್ದಾರೆ.

ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಕೊರೊನಾ ವೈರಸ್ ಸೋಂಕು ತಡೆಯಲು ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗುತ್ತಿದೆ. ಜೀವ ಸುರಕ್ಷಾ ವಾತಾವರಣ ನಿಯಮದಡಿಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಆಡುವ ತಂಡಗಳ ಆಟಗಾರರು, ಅವರೊಂದಿಗೆ ಇರುವ ನೆರವು ಸಿಬ್ಬಂದಿ, ಅಧಿಕಾರಿಗಳು ಮತ್ತು ಕುಟುಂಬದ ಸದಸ್ಯರು ಈ ನಿಯಮಕ್ಕೆ ಒಳಪಡುತ್ತಾರೆ. ಅದಲ್ಲದೇ ಈ ಬಾರಿ ಟೂರ್ನಿಗಿಂತ ಮೂರು–ನಾಲ್ಕು ವಾರಗಳ ಮೊದಲೇ ತಂಡಗಳು ಯುಎಇಗೆ ತೆರಳಬೇಕು. ಅಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕು. ಆದ್ದರಿಂದ ಆಟಗಾರರಿಗೆ ಪತ್ನಿ, ಮಕ್ಕಳು ಮತ್ತು ಸಂಗಾತಿಗಳೊಂದಿಗೆ ತೆರಳುವುದು ಕಷ್ಟಸಾಧ್ಯವಾಗಲಿದೆ.

’ಆಟಗಾರರು ಮತ್ತು ಅಧಿಕಾರಿಗಳು ತಮ್ಮ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗುವುದಕ್ಕೆ ಬಿಸಿಸಿಐ ನಿರ್ಬಂಧ ಹೇರುವುದಿಲ್ಲ. ಈ ಕುರಿತು ಆಟಗಾರರು ಪ್ರತಿನಿಧಿಸುವ ಫ್ರ್ಯಾಂಚೈಸ್‌ಗಳೇ ನಿರ್ಧರಿಸಬೇಕು‘ ಎಂದು ಶುಕ್ರವಾರ ಹೇಳಿತ್ತು.

ADVERTISEMENT

’ಆಟಗಾರರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವುದರತ್ತ ಗಮನ ಕೊಡುತ್ತೇವೆ. ಎಲ್ಲಕ್ಕಿಂತ ಆರೋಗ್ಯ ರಕ್ಷಣೆ ಮುಖ್ಯ. ಸುಸೂತ್ರವಾಗಿ ಎಲ್ಲವೂ ನಡೆಯುವಂತಾಗಬೇಕು. ಆದ್ದರಿಂದ ಈ ಬಾರಿ ಕುಟುಂಬದ ಸದಸ್ಯರನ್ನು ಕರೆತರದಿರಲು ಆಟಗಾರರು ನಿರ್ಧರಿಸುತ್ತಿದ್ದಾರೆ‘ ಎಂದು ಸಿಎಸ್‌ಕೆ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಸಿಎಸ್‌ಕೆ ನಾಯಕ ಮಹೇಂದ್ರಸಿಂಗ್ ಧೋನಿ, ಆಟಗಾರರಾದ ಹರಭಜನ್ ಸಿಂಗ್, ಸುರೇಶ್ ರೈನಾ ಮತ್ತಿತರರು ಪ್ರತಿಬಾರಿಯೂ ತಮ್ಮ ಪತ್ನಿ , ಮಕ್ಕಳೊಂದಿಗೆ ಪ್ರಯಾಣ ಮಾಡುತ್ತಿದ್ದರು.

10ರಂದೇ ಯುಎಇಗೆ?
ಒಂದೊಮ್ಮೆ ಭಾರತ ಸರ್ಕಾರವು ಯುಎಇಯಲ್ಲಿ ಟೂರ್ನಿ ನಡೆಸಲು ಸಮ್ಮತಿಸಿದರೆ ಇದೇ 10ರಂದು ಯುಎಇಗೆ ತಂಡವು ತೆರಳಲಿದೆ ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ. ಎರಡು ವಾರಗಳ ಕ್ವಾರಂಟೈನ್ ಮತ್ತು ನಂತರ ಉಳಿದ ಅವಧಿಯಲ್ಲಿ ಅಭ್ಯಾಸ ಮಾಡಲು ಇದರಿಂದ ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.