ADVERTISEMENT

ಜಾತಿವಾದ ಆರೋಪ; ವಾಸೀಂ ಬೆಂಬಲಕ್ಕೆ ನಿಂತ ಅನಿಲ್ ಕುಂಬ್ಳೆ, ದೊಡ್ಡ ಗಣೇಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2021, 12:29 IST
Last Updated 11 ಫೆಬ್ರುವರಿ 2021, 12:29 IST
ಭಾರತದ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ (ಸಂಗ್ರಹ ಚಿತ್ರ)
ಭಾರತದ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ (ಸಂಗ್ರಹ ಚಿತ್ರ)   

ನವದೆಹಲಿ: ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಮಾಡಿರುವ ಜಾತಿವಾದದ ಆರೋಪಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜ ವಾಸೀಂ ಜಾಫರ್ ಬೆಂಬಲಕ್ಕೆ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮತ್ತು ಕರ್ನಾಟಕದ ಮಾಜಿ ಯಶಸ್ವಿ ಬೌಲರ್ ದೊಡ್ಡ ಗಣೇಶ್ ನಿಂತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಉತ್ತರಾಖಂಡ ಕ್ರಿಕೆಟ್‌ನಲ್ಲಿ ಪದಾಧಿಕಾರಿಗಳ ಹಸ್ತಕ್ಷೇಪ ಹಾಗೂ ಪಕ್ಷಪಾತದಿಂದ ಬೇಸತ್ತು ಕೋಚ್ ಸ್ಥಾನಕ್ಕೆ ವಾಸೀಂ ಜಾಫರ್ ರಾಜೀನಾಮೆ ನೀಡಿದ್ದರು. ಆದರೆ ಬಳಿಕ ನಡೆದ ಬೆಳವಣಿಗೆಯಲ್ಲಿ ಉತ್ತರಾಖಂಡ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಮಹಿಮ್ ವರ್ಮಾ ಅವರು ಜಾಫರ್ ಮೇಲೆ ಜಾತಿವಾದದ ಆರೋಪ ಹೊರಿಸಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಅನಿಲ್ ಕುಂಬ್ಳೆ, 'ನಿಮ್ಮೊಂದಿಗೆ ನಾವಿದ್ದೇವೆ ವಾಸೀಂ. ನೀವು ಸರಿಯಾದ ಕೆಲಸ ಮಾಡಿದ್ದೀರಿ. ನಿಮ್ಮ ಮಾರ್ಗದರ್ಶನವನ್ನು ಆಟಗಾರರು ಮಿಸ್ ಮಾಡಿಕೊಳ್ಳಲಿದ್ದಾರೆ ಎಂಬುದೇ ದುರದೃಷ್ಟಕರ' ಎಂದು ತಿಳಿಸಿದರು.

ADVERTISEMENT

ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡಾ ಸಹ ಟ್ವೀಟ್ ಮಾಡಿದ್ದು, 'ವಾಸೀಂ ಕ್ರಿಕೆಟ್‌ನ ಅತ್ಯುತ್ತಮ ರಾಯಭಾರಿಯಾಗಿದ್ದು, ಭಾರತವನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದೀರಿ. ನಿಮ್ಮಂತಹ ಮಾಜಿ ಆಟಗಾರನಿಗೆ ಈ ಪರಿಸ್ಥಿತಿ ಎದುರಾಗಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನೀವು ಕ್ರಿಕೆಟ್‌ನ ರತ್ನ, ಮಾನವ ಹಾಗೂ ಸಹೋದರ. ನೀವು ಹಾಗೂ ನಿಮ್ಮಸಮಗ್ರತೆಯುಕ್ರಿಕೆಟ್ ಜಗತ್ತಿಗೆ ತಿಳಿದಿದೆ' ಎಂದು ತಿಳಿಸಿದರು.

ಭಾರತದ ಎಡಗೈ ವೇಗಿ ಇರ್ಫಾನ್ ಪಠಾಣ್ ಕೂಡಾ ಜಾಫರ್ ಪರ ಸ್ವರ ಎತ್ತಿದ್ದು, ನಿಮಗೆ ವಿವರಣೆ ನೀಡಬೇಕಾದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಈ ಮೊದಲು ವಿವಾದದ ಕುರಿತು ಜಾಫರ್ ಪರವಾಗಿ ಪ್ರತಿಕ್ರಿಯಿಸುವಂತೆ ಕಾಂಗ್ರೆಸ್‌ನಿಂದ ಉಚ್ಛಾಟಿತನಾಯಕ ಸಂಜಯ್ ಜಾ ಮನವಿ ಮಾಡಿದ್ದರು. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ಹಾಗೂ ರೋಹಿತ್ ಶರ್ಮಾಗೆ ಟ್ಯಾಗ್ ಮಾಡಿರುವ ಸಂಜಯ್ ಜಾ, ನಿಮಗೆ ಯಾವುದೇ ಸಹಾಯ ಬೇಕಿದ್ದರೆ, ನಿಮಗಾಗಿ ಟ್ವೀಟ್ ಡ್ರಾಫ್ಟ್ ಮಾಡುತ್ತೇನೆ. ಅದನ್ನು ನೀವು ಕಾಪಿ-ಪೇಸ್ಟ್ ಮಾಡಬಹುದು. ರೈತರ ಪ್ರತಿಭಟನೆಯ ಸಂದರ್ಭದಂತೆ ನೀವು ಸಾರ್ವಜನಿಕವಾಗಿ ಟ್ವೀಟ್ ಮಾಡಬೇಕು. ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ ಎಂದು ಹೇಳಿದ್ದರು.

ಅನಿಲ್ ಕುಂಬ್ಳೆ ಹಾಗೂ ವಾಸೀಂ ಜಾಫರ್ ತಮ್ಮ ಆಡುವ ಕಾಲದಲ್ಲಿ ಟೀಮ್ ಇಂಡಿಯಾ ಪರ ಒಂದೇ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದರು. ಈಗ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಪರ ಕೋಚಿಂಗ್ ಪ್ಯಾನೆಲ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕುಂಬ್ಳೆ ಮುಖ್ಯ ಕೋಚ್ ಆಗಿದ್ದರೆ ಜಾಫರ್ ಬ್ಯಾಟಿಂಗ್ ತರಬೇತುದಾರನಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.