ADVERTISEMENT

ನ್ಯೂಜಿಲೆಂಡ್‌ ಪಡೆಗೆ ಶಾಂತೋ ಬಳಗದ ಸವಾಲು: ಸೆಮಿಫೈನಲ್ ಮೇಲೆ ಕಿವೀಸ್ ಕಣ್ಣು

ನ್ಯೂಜಿಲೆಂಡ್‌ ಪಡೆಗೆ ಶಾಂತೋ ಬಳಗದ ಸವಾಲು ಇಂದು: ಬಾಂಗ್ಲಾಗೆ ಮಾಡು ಇಲ್ಲವೇ ಮಡಿ ಪಂದ್ಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 13:37 IST
Last Updated 23 ಫೆಬ್ರುವರಿ 2025, 13:37 IST
ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟನರ್‌  –ಎಎಫ್‌ಪಿ ಚಿತ್ರ
ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟನರ್‌  –ಎಎಫ್‌ಪಿ ಚಿತ್ರ   

ರಾವಲ್ಪಿಂಡಿ: ಆತ್ಮವಿಶ್ವಾಸಭರಿತ ನ್ಯೂಜಿಲೆಂಡ್ ತಂಡವು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಉತ್ಸಾಹದಲ್ಲಿದೆ.

ಸೋಮವಾರ  ಇಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ‘ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವತ್ತ ಚಿತ್ತ ನೆಟ್ಟಿದೆ. ಮಿಚೆಲ್ ಸ್ಯಾಂಟನರ್ ನಾಯಕತ್ವದ ಕಿವೀಸ್ ಬಳಗವು ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನವನ್ನು 60 ರನ್‌ಗಳಿಂದ ಸೋಲಿಸಿತ್ತು. ಜೊತೆಗೆ 1.200 ನೆಟ್‌ ರನ್‌ ರೇಟ್ ಕೂಡ ಹೊಂದಿದೆ. 

ಇನ್ನೊಂದೆಡೆ, ಬಾಂಗ್ಲಾದೇಶ ತಂಡವು ಭಾರತದ ಎದುರು 6 ವಿಕೆಟ್‌ಗಳಿಂದ ಸೋತಿತ್ತು. ಸೆಮಿಫೈನಲ್ ಪ್ರವೇಶಿಸುವ ಆಸೆ ಜೀವಂತವಾಗುಳಿಯಬೇಕಾದರೆ ಬಾಂಗ್ಲಾ ತಂಡವು ಈ ಪಂದ್ಯದಲ್ಲಿ ಜಯಿಸಲೇಬೇಕು. ನಂತರ ಮೂರನೇ ಪಂದ್ಯದಲ್ಲಿ ಪಾಕಿಸ್ತಾನವನ್ನೂ ಸೋಲಿಸಬೇಕು. 

ADVERTISEMENT

ಆದರೆ ಕಿವೀಸ್ ವಿರುದ್ಧ ಜಯಿಸುವುದು ಬಾಂಗ್ಲಾಗೆ ಅಷ್ಟು ಸುಲಭವಲ್ಲ. ಮೊದಲ ಪಂದ್ಯದಲ್ಲಿ ವಿಲ್ ಯಂಗ್ ಮತ್ತು ಟಾಮ್ ಲೇಥಮ್ ಶತಕ ಹೊಡೆದಿದ್ದರು. ಗಾಯಗೊಂಡು ವಿಶ್ರಾಂತಿಯಲ್ಲಿರುವ ರಚಿನ್ ರವೀಂದ್ರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಯಂಗ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಅವರು ಡೆವೊನ್ ಕಾನ್ವೆ ಜೊತೆಗೆ ಉತ್ತಮ ಆರಂಭ ನೀಡಿದ್ದರು. ಈಗ ರಚಿನ್ ಫಿಟ್ ಆಗಿ ಮರಳಿದರೆ ಯಂಗ್ ಅವರನ್ನು ತಂಡವು ಕೈಬಿಡುವುದೇ ಎಂಬುದನ್ನು ನೋಡಬೇಕು. ಅನುಭವಿ ಕೇನ್ ವಿಲಿಯಮ್ಸನ್, ಡ್ಯಾರಿಸ್ ಮಿಚೆಲ್ ಅವರು ಲಯಕ್ಕೆ ಮರಳಿದರೆ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಾಢ್ಯವಾಗುತ್ತದೆ. 

ಪಾಕ್ ಎದುರಿನ ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ ಮಿಂಚಿನ ಅರ್ಧಶತಕ ಹೊಡೆದಿದ್ದರು. ಅಲ್ಲದೇ ಫೀಲ್ಡಿಂಗ್‌ನಲ್ಲಿ ಮಿಂಚಿದ್ದರು. ವಿಲಿಯಮ್ ಓ ರೂರ್ಕಿ, ಮ್ಯಾಟ್ ಹೆನ್ರಿ ಹಾಗೂ ಸ್ಯಾಂಟನರ್ ಅವರು ಎದುರಾಳಿ ಬ್ಯಾಟರ್‌ಗಳಿಗೆ ಕಠಿಣ ಸವಾಲೊಡ್ಡುವ ಬೌಲರ್‌ಗಳು. 

ಬಾಂಗ್ಲಾ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಲಯಕ್ಕೆ ಮರಳುವ ಸವಾಲು ಎದುರಿಸುತ್ತಿದ್ದಾರೆ. ಭಾರತದ ಎದುರಿನ ಪಂದ್ಯದಲ್ಲಿ ತಂಡವು 35ಕ್ಕೆ5 ವಿಕೆಟ್ ಕಳೆದುಕೊಂಡಿತ್ತು. ಆ ಹಂತದಲ್ಲಿ ಶತಕ ಬಾರಿಸಿದ್ದ ತೌಹಿದ್ ಹೃದಯ್ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಡೆದಿದ್ದರು. ಏಳನೇ ಕ್ರಮಾಂಕದ ಬ್ಯಾಟರ್ ಜಾಕಿರ್ ಅಲಿ ಅರ್ಧಶತಕ ಹೊಡೆದಿದ್ದರು. ಬೌಲಿಂಗ್‌ನಲ್ಲಿ ರಿಷಾದ್ ಹುಸೇನ್, ಅನುಭವಿ ಮುಸ್ತಫಿಜುರ್ ರೆಹಮಾನ್ ಮತ್ತು ತಸ್ಕಿನ್ ಅಹಮದ್ ಅವರಮೇಲೆ ತಂಡವು ಅವಲಂಬಿತವಾಗಿದೆ. 

ಪಂದ್ಯ ಆರಂಭ: ಮಧ್ಯಾಹ್ನ 2.30

ನೇರಪ್ರಸಾರ: ಸ್ಟಾರ್ ಸ್ಫೋರ್ಟ್ಸ್, ಜಿಯೊಹಾಟ್‌ಸ್ಟಾರ್

ಬಾಂಗ್ಲಾದೇಶ ತಂಡದ ಆಟಗಾರರು ಅಭ್ಯಾಸ ನಡೆಸಿದರು  –ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.