ADVERTISEMENT

ರೋಹಿತ್ ಶರ್ಮಾ ದೇಹದ ತೂಕದ ಬಗ್ಗೆ ಮಾತು: ವಿವಾದಕ್ಕೆ ಕಾರಣವಾದ ಕೈ ವಕ್ತಾರೆ ಪೋಸ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2025, 5:29 IST
Last Updated 3 ಮಾರ್ಚ್ 2025, 5:29 IST
   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರ ದೇಹ ತೂಕದ ಕುರಿತು ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮೊಹಮ್ಮದ್‌ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಮಾಡಿದ ಪೋಸ್ಟ್‌ ವಿವಾದಕ್ಕೆ ಕಾರಣವಾಗಿದೆ. 

ಈ ಬೆಳವಣಿಗೆ ಬೆನ್ನಲ್ಲೇ ಶಮಾ ನಡೆಯನ್ನು ಪಕ್ಷದ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಪೋಸ್ಟ್‌ ಅನ್ನು ತೆಗೆದು ಹಾಕುವಂತೆ ಸೂಚಿಸಿದ್ದು, ಇಂತಹ ವರ್ತನೆಯನ್ನು ಪುನಾರಾವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ.

ಪೋಸ್ಟ್‌ನಲ್ಲಿ ಏನಿತ್ತು?: ‘ರೋಹಿತ್‌ ಶರ್ಮಾ ದಪ್ಪಗಾಗಿದ್ದಾರೆ. ತೂಕವನ್ನು ಕಳೆದುಕೊಳ್ಳಬೇಕಾಗಿದೆ. ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಅವರು’ ಎಂದು ಡಾ. ಶಮಾ ಮೊಹಮ್ಮದ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು. ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅವರು 15 ರನ್‌ ಗಳಿಸಿ ಔಟಾದ ಬೆನ್ನಲ್ಲೇ, ಈ ಪೋಸ್ಟ್ ಮಾಡಿದ್ದರು.

ADVERTISEMENT

ಅಂತರ ಕಾಯ್ದುಕೊಂಡ ಕಾಂಗ್ರೆಸ್‌: ಶಮಾ ಪೋಸ್ಟ್‌ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ, ‘ರೋಹಿತ್‌ ಶರ್ಮಾ ಕುರಿತು ಪಕ್ಷದ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್‌ ಮಾಡಿದ ಪೋಸ್ಟ್‌ ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ. ಪೋಸ್ಟ್‌ ಅನ್ನು ತೆಗೆದುಹಾಕುವಂತೆ ತಿಳಿಸಿದ್ದು, ಮತ್ತೆ ಇಂತಹ ತಪ್ಪು ಮಾಡದಂತೆ ತಿಳಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಕಿಡಿ: ‘ರಾಹುಲ್‌ ಗಾಂಧಿ ನಾಯಕತ್ವದಲ್ಲಿ 90 ಚುನಾವಣೆ ಕಳೆದುಕೊಂಡವರು, ರೋಹಿತ್‌ ಶರ್ಮಾ ಅವರ ನಾಯಕತ್ವವನ್ನು ಪ್ರಭಾವಿಯಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಬಿಜೆಪಿ ನಾಯಕ ಶೆಹಜಾದ್‌ ಪೂನಾವಾಲಾ ‘ಎಕ್ಸ್‌’ನಲ್ಲೇ ತಿರುಗೇಟು ನೀಡಿದ್ದಾರೆ.

ಶಮಾ ಮೊಹಮ್ಮದ್‌ ಹಂಚಿಕೊಂಡಿದ್ದ ಪೋಸ್ಟ್‌

ಅತ್ಯಂತ ಜವಾಬ್ದಾರಿಯುತ ವ್ಯಕ್ತಿಯೊಬ್ಬರು ಇಂತಹ ಕ್ಷುಲ್ಲಕ ಹೇಳಿಕೆ ನೀಡಿರುವುದು ದುರದೃಷ್ಟಕರ. ಇದರಿಂದ ಆಟಗಾರರು ತಂಡವೇ ಎದೆಗುಂದುವ ಸಾಧ್ಯತೆಯಿದೆ
ದೇವಜೀತ್‌ ಸೈಕಿಯಾ ಬಿಸಿಸಿಐ ಕಾರ್ಯದರ್ಶಿ
ಶಮಾ ಬೆಂಬಲಿಸಿದ ರಾಯ್‌
‘ರೋಹಿತ್‌ ಶರ್ಮಾ ಅವರ ಪ್ರದರ್ಶನ ಅತ್ಯಂತ ಕಳಪೆಯಾಗಿದೆ ಎಂಬುದು ನಿಜ. ಅವರು ಒಂದು ಶತಕ ಬಾರಿಸಿದ್ದು ಬಿಟ್ಟರೆ ಉಳಿದಂತೆ 234 ಅಥವಾ 5 ರನ್‌ ಗಳಿಸಿದ್ದಾರೆ. ಅವರು ತಂಡದಲ್ಲಿರಬಾರದು. ಬೇರೆ ಆಟಗಾರರು ಚೆನ್ನಾಗಿ ಆಟವಾಡುತ್ತಿರುವ ಕಾರಣ ಭಾರತ ತಂಡ ಗೆಲ್ಲುತ್ತಿದೆ. ನಾಯಕನಾಗಿ ಅವರು ಕೊಡುಗೆ ಏನೂ ಇಲ್ಲ’ ಎಂದು ಪಶ್ಚಿಮ ಬಂಗಾಳದ ಡಂ–ಡಂ ಲೋಕಸಭಾ ಕ್ಷೇತ್ರದ ತೃಣಮೂಲ ಸಂಸದ ಸೌಗತ ರಾಯ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.