ADVERTISEMENT

IPL ಮೊದಲ ಪಂದ್ಯದಲ್ಲೇ ಗಾಯ; ವಿಲಿಯಮ್ಸನ್ ಟೂರ್ನಿಯಲ್ಲಿ ಮುಂದುವರಿಯುವುದು ಅನುಮಾನ

ಪಿಟಿಐ
Published 1 ಏಪ್ರಿಲ್ 2023, 10:43 IST
Last Updated 1 ಏಪ್ರಿಲ್ 2023, 10:43 IST
ಗಾಯಾಳು ಕೇನ್‌ ವಿಲಿಯಮ್ಸನ್‌ ಅವರನ್ನು ಕರೆದುಕೊಂಡು ಹೋಗುತ್ತಿರುವುದು (ಪಿಟಿಐ ಚಿತ್ರ)
ಗಾಯಾಳು ಕೇನ್‌ ವಿಲಿಯಮ್ಸನ್‌ ಅವರನ್ನು ಕರೆದುಕೊಂಡು ಹೋಗುತ್ತಿರುವುದು (ಪಿಟಿಐ ಚಿತ್ರ)   

ಅಹಮದಾಬಾದ್: ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರು ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲೇ ಗಾಯಗೊಂಡಿದ್ದು, ಅವರು ಟೂರ್ನಿಯಲ್ಲಿ ಮುಂದುವರಿಯುವ ಬಗ್ಗೆ ಅನುಮಾನಗಳು ಮೂಡಿವೆ.

16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಶುಕ್ರವಾರ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಎದುರು ಗೆಲ್ಲುವ ಮೂಲಕ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ಶುಭಾರಂಭ ಮಾಡಿದೆ.

32 ವರ್ಷದ ಕೇನ್‌ ವಿಲಿಯಮ್ಸನ್‌ ಈ ಬಾರಿ ಗುಜರಾತ್‌ ಪರ ಆಡುತ್ತಿದ್ದಾರೆ. ಮಿಡ್‌ವಿಕೆಟ್ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅವರು ಚೆನ್ನೈ ತಂಡದ ಆರಂಭಿಕ ಋತುರಾಜ್ ಗಾಯಕವಾಡ್‌ ಹೊಡೆದ ಚೆಂಡನ್ನು ಕ್ಯಾಚ್ ಮಾಡುವ ಪ್ರಯತ್ನದಲ್ಲಿ ಗಾಯಗೊಂಡಿದ್ದಾರೆ. ಅವರ ಮಂಡಿಗೆ ಪೆಟ್ಟಾಗಿದೆ. ಪಂದ್ಯದ 13ನೇ ಓವರ್‌ ವೇಳೆ ಹೀಗಾಯಿತು. ಇದರಿಂದಾಗಿ ಉಳಿದ ಅವಧಿಗೆ ಕೇನ್‌ ಬದಲು ಸಾಯ್‌ ಸುದರ್ಶನ್‌ ಅವರನ್ನು ‘ಇಂಪ್ಯಾಕ್ಟ್‌ ಪ್ಲೇಯರ್‌’ ಆಗಿ ಕಣಕ್ಕಿಳಿಸಲಾಯಿತು.

ADVERTISEMENT

ಕೇನ್‌ ಅವರು ಅನಿರ್ಧಿಷ್ಠಾವಧಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಬಹುದು ಎಂದು ಐಪಿಎಲ್‌ ಮೂಲಗಳು ತಿಳಿಸಿವೆ.

ಕೇನ್‌ ಅವರಿಗಾಗಿರುವ ಗಾಯದ ಗಂಭೀರತೆ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಗುಜರಾತ್‌ ನಾಯಕ ಹಾರ್ದಿಕ್‌ ಪಾಂಡ್ಯ ಪಂದ್ಯದ ಬಳಿಕ ಹೇಳಿದ್ದಾರೆ.

'ಮಂಡಿಗೆ ಗಾಯವಾಗಿದೆ. ಆದರೆ, ಖಚಿತವಾಗಿ ಏನಾಗಿದೆ ಎಂಬುದು ಗೊತ್ತಿಲ್ಲ. ಗಾಯದ ಗಂಭೀರತೆ ಎಂತಹದು ಮತ್ತು ಅವರು ಚೇತರಿಸಿಕೊಳ್ಳಲು ಎಷ್ಟು ಸಮಯಬೇಕು ಎಂಬ ಮಾಹಿತಿ ಇಲ್ಲ. ಸದ್ಯಕ್ಕೆ ಇಷ್ಟೇ ಸಮಯ ಬೇಕಾಗಬಹುದು ಎಂದು ಹೇಳಲಾಗದು' ಎಂದಿದ್ದಾರೆ.

ಆಕ್ಲೆಂಡ್‌ನಿಂದ ಪ್ರತಿಕ್ರಿಯಿಸಿರುವ ನ್ಯೂಜಿಲೆಂಡ್‌ ತಂಡದ ಕೋಚ್‌ ಗ್ರೇ ಸ್ಟೀಡ್‌ ಅವರು, ಕೇನ್‌ ಗಾಯಗೊಂಡಿರುವುದು ರಾಷ್ಟ್ರೀಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಕೇನ್‌ ತಂಡದಿಂದ ಹೊರಗುಳಿದರೆ, ಟೈಟನ್ಸ್‌ ಪಡೆ ಬದಲಿ ಆಟಗಾರರ ಮೊರೆ ಹೋಗಲಿದೆ. ಸದ್ಯ ಐಪಿಎಲ್‌ ವೀಕ್ಷಕ ವಿವರಣೆಗಾರರಾಗಿರುವ ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್‌ ಸ್ಟೀವ್ ಸ್ಮಿತ್‌ ಮತ್ತು ಶ್ರೀಲಂಕಾದ ದಾಸುನ್‌ ಶನಕ ಅವರತ್ತ ಮುಖ ಮಾಡುವ ಸಾಧ್ಯತೆ ಇದೆ.

ಇತ್ತೀಚೆಗೆ ನಡೆದ ಹರಾಜಿನಲ್ಲಿ ಯಾವುದೇ ತಂಡ ಈ ಇಬ್ಬರನ್ನು ಖರೀದಿಸಿರಲಿಲ್ಲ.

ಗುಜರಾತ್ ಶುಭಾರಂಭ
ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್ ಟೈಟನ್ಸ್‌ ಶುಭಾರಂಭ ಮಾಡಿದೆ. ಪಂದ್ಯದಲ್ಲಿ, ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಚೆನ್ನೈ, ಆರಂಭಿಕ ಬ್ಯಾಟರ್‌ ಋತುರಾಜ್‌ ಗಾಯಕವಾಡ್‌ (92) ಅವರ ಬ್ಯಾಟಿಂಗ್‌ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 178 ರನ್ ಕಲೆಹಾಕಿತ್ತು.

ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಈ ಗುರಿಯನ್ನು ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ತಲುಪಿತು. 36 ಎಸೆತಗಳಲ್ಲಿ 63 ರನ್‌ ಗಳಿಸಿದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.