
ಬೆಂಗಳೂರು: ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಭಾರತ ಏಕದಿನ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿರುವ ಕನ್ನಡಿಗ ಕೆ.ಎಲ್. ರಾಹುಲ್ ಅವರ ಪ್ರದರ್ಶನದ ಕುರಿತು ಮತ್ತು ನಾಯಕತ್ವದ ಕೌಶಲ್ಯದ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿವೆ. ಈ ನಡುವೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್ ಸ್ಟೇನ್ ರಾಹುಲ್ ಕುರಿತು ಮಾತನಾಡಿದ್ದಾರೆ.
‘ಕೆ.ಎಲ್. ರಾಹುಲ್ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ಬ್ಯಾಟರ್, ಆದರೆ, ಅಲ್ಲಿ ಸ್ಲಾಟ್ ಖಾಲಿ ಇಲ್ಲದ ಕಾರಣ ಅವರು 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮತ್ತು ಅಲ್ಲಿಯೂ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ’ ಎಂದು ಸ್ಟೇನ್ ಹೇಳಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೆ.ಎಲ್. ರಾಹುಲ್, ಮೊದಲೆರಡು ಪಂದ್ಯಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. (ರಾಂಚಿಯಲ್ಲಿ 60, ರಾಯಪುರದಲ್ಲಿ 66) ಆ ಮೂಲಕ ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದ್ದಾರೆ.
ಮುಂದುವರೆದು ಮಾತನಾಡಿದ ಸ್ಟೇನ್, ‘ಕೆ.ಎಲ್. ರಾಹುಲ್ ಅವರಿಗಿರುವ ಕೌಶಲ್ಯ ಗಮನಿಸಿದರೆ, ಅವರು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರೆ, ಇನ್ನೂ ಅನೇಕ ಶತಕಗಳನ್ನು ದಾಖಲಿಸುತ್ತಿದ್ದರು’ ಎಂದು ತಿಳಿಸಿದ್ದಾರೆ.
‘ಕೆ.ಎಲ್ ರಾಹುಲ್ ಅವರು, ಪ್ರಬುದ್ಧ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ತಂಡವನ್ನು ಅಮೋಘವಾಗಿ ಮುನ್ನಡೆಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಯಾವಾಗ ನಿಧಾನವಾಗಿ ಆಡಬೇಕು? ಯವಾಗ ಸ್ಫೋಟವಾಗಿ ಬ್ಯಾಟ್ ಮಾಡಬೇಕು ಎಂಬುದು ಅವರಿಗೆ ತಿಳಿದಿತ್ತು’ ಎಂದು ರಾಹುಲ್ ಅವರನ್ನು ಸ್ಟೇನ್ ಹಾಡಿಹೊಗಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.