ADVERTISEMENT

ಡೆಲ್ಲಿಗೆ ಪಂತ್ ಬಲ; ಹೈದರಾಬಾದ್‌ಗೆ ರಶೀದ್‌ ಮೇಲೆ ನಿರೀಕ್ಷೆ

ಪಿಟಿಐ
Published 24 ಏಪ್ರಿಲ್ 2021, 19:31 IST
Last Updated 24 ಏಪ್ರಿಲ್ 2021, 19:31 IST
ರಿಷಭ್ ಪಂತ್ –ಪಿಟಿಐ ಚಿತ್ರ
ರಿಷಭ್ ಪಂತ್ –ಪಿಟಿಐ ಚಿತ್ರ   

ಚೆನ್ನೈ: ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಲೆಗ್ ಸ್ಪಿನ್ನರ್ ರಶೀದ್ ಖಾನ್ ನಡುವಿನ ಹೋರಾಟ ಭಾನುವಾರ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ಮುಖಾಮುಖಿಯ ಪ್ರಮುಖ ಆಕರ್ಷಣೆಯಾಗಲಿದೆ.

ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದ ಪಿಚ್‌ ಬಗ್ಗೆ ಈಗಾಗಲೇ ಟೀಕೆಗಳು ಕೇಳಿಬಂದಿದ್ದು ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಯಾವ ತಂತ್ರಗಳನ್ನು ಅನುಸರಿಸುತ್ತಾರೆ ಎಂಬುದು ಕುತೂಹಲದ ವಿಷಯ. ಇದು ಇಲ್ಲಿ ನಡೆಯಲಿರುವ 10ನೇ ಮತ್ತು ಕೊನೆಯ ಪಂದ್ಯವಾಗಲಿದೆ. ಮುಂಬೈಯಲ್ಲೂ ಭಾನುವಾರ ಕೊನೆಯ ಪಂದ್ಯ. ಸೋಮವಾರದಿಂದ ಅಹಮದಾಬಾದ್ ಮತ್ತು ದೆಹಲಿಯಲ್ಲಿ ಹಣಾಹಣಿ ನಡೆಯಲಿದೆ.

ಚೆನ್ನೈಯಲ್ಲಿ ಈ ವರೆಗೆ ನಡೆದ ಒಂಬತ್ತು ಪಂದ್ಯಗಳ ಪೈಕಿ ಕೆಲವೇ ಕೆಲವು ಪಂದ್ಯಗಳಲ್ಲಿ ಮಾತ್ರ 170ಕ್ಕೂ ಅಧಿಕ ರನ್ ದಾಖಲಾಗಿದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳಿಗೆ ಇಲ್ಲಿನ ಪಿಚ್ ಸವಾಲಾಗಿದೆ.

ADVERTISEMENT

ಡೆಲ್ಲಿ ತಂಡದ ಆರಂಭಿಕ ಜೋಡಿ ಪೈಕಿ ಶಿಖರ್ ಧವನ್ ಉತ್ತಮ ಫಾರ್ಮ್‌ನಲ್ಲಿದ್ದು ಪೃಥ್ವಿ ಶಾ ಕೆಲವು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಾರೆ. ‘ಹ್ಯಾಟ್ರಿಕ್’ ಸೋಲಿನ ನಂತರ ಗೆಲುವಿನ ಲಯಕ್ಕೆ ಮರಳಿರುವ ಹೈದರಾಬಾದ್‌ ತಂಡಕ್ಕೆ ಕೇನ್ ವಿಲಿಯಮ್ಸನ್ ಮರಳಿರುವುದು ಬಲ ತುಂಬಿದೆ. ಮನೀಷ್ ಪಾಂಡೆ, ಡೇವಿಡ್ ವಾರ್ನರ್ ಮತ್ತು ಜಾನಿ ಬೆಸ್ಟೊ ಅವರ ಬಲವೂ ತಂಡಕ್ಕೆ ಇದೆ. ಆದರೆ ನಟರಾಜನ್ ಅವರು ತಂಡದಿಂದ ಹೊರಬಿದ್ದಿರುವುದು ತಂಡಕ್ಕೆ ಹಿನ್ನಡೆಯಾಗಿದ್ದು ರಶೀದ್ ಖಾನ್ ಜವಾಬ್ದಾರಿ ಹೆಚ್ಚಾಗಿದೆ.

ಭುವನೇಶ್ವರ್ ಕುಮಾರ್‌, ಸಂದೀಪ್ ಶರ್ಮಾ ಮತ್ತು ಸಿದ್ಧಾರ್ಥ್ ಕೌಲ್ ಬೌಲಿಂಗ್‌ನಲ್ಲಿ ಇನ್ನೂ ಲಯ ಕಂಡುಕೊಂಡಿಲ್ಲ. ಆಲ್‌ರೌಂಡರ್ ವಿಜಯಶಂಕರ್ ಭರವಸೆ ಮೂಡಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರದೇ ಇರುವುದು ಡೆಲ್ಲಿ ಕ್ಯಾಪಿಟಲ್ಸ್‌ನ ಚಿಂತೆಗೆ ಕಾರಣವಾಗಿದೆ. ಕ್ರಿಸ್ ವೋಕ್ಸ್‌, ಕಗಿಸೊ ರಬಾಡ, ಆವೇಶ್ ಖಾನ್‌ ಮತ್ತು ಲಲಿತ್ ಯಾದವ್ ಮೇಲೆ ತಂಡ ಭರವಸೆ ಇರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.