ADVERTISEMENT

IPL-2020: ಬೆಂಗಳೂರು ‘ಚಾಲೆಂಜ್’ಗೆ ಹೈದರಾಬಾದ್ ತತ್ತರ

ದೇವದತ್ತ ಪಡಿಕ್ಕಲ್– ಆ್ಯರನ್ ಫಿಂಚ್ 90 ರನ್‌ಗಳ ಜೊತೆಯಾಟ; ಜಾನಿ ಬೇಸ್ಟೊ ಅರ್ಧಶತಕ ವ್ಯರ್ಥ

ಪಿಟಿಐ
Published 21 ಸೆಪ್ಟೆಂಬರ್ 2020, 21:20 IST
Last Updated 21 ಸೆಪ್ಟೆಂಬರ್ 2020, 21:20 IST
ಆರ್‌ಸಿಬಿ ತಂಡದ ದೇವದತ್ತ ಪಡಿಕ್ಕಲ್ ಬ್ಯಾಟಿಂಗ್‌ ವೈಖರಿ
ಆರ್‌ಸಿಬಿ ತಂಡದ ದೇವದತ್ತ ಪಡಿಕ್ಕಲ್ ಬ್ಯಾಟಿಂಗ್‌ ವೈಖರಿ    
""

ದುಬೈ: ಪದಾರ್ಪಣೆ ಪಂದ್ಯದಲ್ಲಿ ಮೋಹಕ ಬ್ಯಾಟಿಂಗ್ ಮೂಲಕ ದೇವದತ್ತ ಪಡಿಕ್ಕಲ್ (56; 42 ಎಸೆತ, 8 ಬೌಂಡರಿ) ಮಿಂಚಿದರು. ಆ್ಯರನ್ ಫಿಂಚ್ ಜೊತೆ ಅಮೋಘ ಜೊತೆಯಾಟವಾಡಿದ ಪಡಿಕ್ಕಲ್ ಹಾಕಿಕೊಟ್ಟ ಬುನಾದಿ ಮೇಲೆ ಎಬಿ ಡಿವಿಲಿಯರ್ಸ್‌ (51; 30 ಎ, 2 ಸಿ, 4 ಬೌಂ) ಇನಿಂಗ್ಸ್ ಬೆಳೆಸಿದರು.

ಇವರಿಬ್ಬರ ಆಟದ ನೆರವಿನಿಂದ ಸವಾಲಿನ ಮೊತ್ತ ಕಲೆ ಹಾಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಮೊದಲ ಪಂದ್ಯದಲ್ಲಿ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿತು. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 10 ರನ್‌ಗಳಿಂದ ಜಯಿಸಿತು.

ಆರ್‌ಸಿಬಿ ನೀಡಿದ 164 ರನ್‌ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ 19.4 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟಾಯಿತು. ಮೂರು ವಿಕೆಟ್ ಉರುಳಿಸಿದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಎದುರಾಳಿ ಬ್ಯಾಟಿಂಗ್ ಪಡೆಗೆ ಪೆಟ್ಟು ನೀಡಿದರು.

ADVERTISEMENT

ಕಳೆದ ಆವೃತ್ತಿಯಲ್ಲಿ ತಂಡದಲ್ಲಿದ್ದರೂ ಪಡಿಕ್ಕಲ್‌ ಅವರಿಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಅವರ ಮೇಲೆ ವಿಶ್ವಾಸವಿರಿಸಿದ ತಂಡದ ಆಡಳಿತ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ನೀಡಿತು. ಇದಕ್ಕೆ ಅವರು ಅಮೋಘ ಆಟದ ಮೂಲಕ ಕೃತಜ್ಞತೆ ಸಲ್ಲಿಸಿದರು.

ಭುವನೇಶ್ವರ್ ಕುಮಾರ್ ಅವರ ಮೊದಲ ಓವರ್‌ನ ಮೂರು ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸಿದ ಪಡಿಕ್ಕಲ್ ನಾಲ್ಕನೇ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ಖಾತೆ ತೆರೆದರು. ಸಂದೀಪ್ ಶರ್ಮಾ ಹಾಕಿದ ಎರಡನೇ ಓವರ್‌ನಲ್ಲಿ ಪಡಿಕ್ಕಲ್ ಆಟ ರಂಗೇರಿತು. ಅವರಿಗೆ ಆ್ಯರನ್ ಫಿಂಚ್ ಉತ್ತಮ ಬೆಂಬಲ ನೀಡಿದರು.

ಆರನೇ ಓವರ್‌ನಲ್ಲಿ ಇವರಿಬ್ಬರು ತಂಡದ ಮೊತ್ತವನ್ನು 50 ರನ್‌ಗಳ ಗಡಿ ದಾಟಿಸಿದರು. 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಡಿಕ್ಕಲ್ 90 ರನ್‌ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ತಂಡ 200ರ ಗಡಿ ತಲುಪುವ ನಿರೀಕ್ಷೆ ಇತ್ತು. ಆದರೆ ಎರಡು ಎಸೆತಗಳ ಅಂತರದಲ್ಲಿ ಇಬ್ಬರೂ ವಿಕೆಟ್ ಕಳೆದುಕೊಂಡ ನಂತರ ರನ್ ಗಳಿಕೆ ವೇಗಕ್ಕೆ ಕಡಿವಾಣ ಬಿತ್ತು.

ಡಿವಿಲಿಯರ್ಸ್‌ ಬೌಂಡರಿಗಳ ಅಬ್ಬರ: ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದ ಎಬಿ ಡಿವಿಲಿಯರ್ಸ್‌ ಎಂದಿನಂತೆ ಬೀಸು ಹೊಡೆತಗಳ ಮೂಲಕ ರನ್ ಗತಿ ಹೆಚ್ಚಿಸಿದರು. ಮೂರನೇ ವಿಕೆಟ್‌ಗೆ ಇವರಿಬ್ಬರು 33 ರನ್ ಸೇರಿಸಿದರು. ಕೊಹ್ಲಿ ಅಲ್ಪಮೊತ್ತಕ್ಕೆ ಔಟಾದ ನಂತರವೂ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು.

ನೋವಿನಿಂದ ಬಳಲಿದ ಮಾರ್ಶ್‌: ಸನ್‌ರೈಸರ್ಸ್ ತಂಡದಲ್ಲಿರುವ ಆಸ್ಟ್ರೇಲಿಯಾದ ಮಿಷೆಲ್ ಮಾರ್ಶ್ ಪಂದ್ಯದ ನಡುವೆ ಗಾಯಗೊಂಡು ವಾಪಸಾದರು. ಆರ್‌ಸಿಬಿ ಇನಿಂಗ್ಸ್‌ನ ಐದನೇ ಓವರ್‌ನ ನಾಲ್ಕನೇ ಎಸೆತದ ನಂತರ ಫಾಲೊ ಥ್ರೋದಲ್ಲಿ ಚೆಂಡು ಹಿಡಿಯಲು ಪ್ರಯತ್ನಿಸಿದಾಗ ಹಿಂಗಾಲಿನಲ್ಲಿ ನೋವು ಕಾಣಿಸಿಕೊಂಡಿತು. ಹೀಗಾಗಿ ವಿಜಯಶಂಕರ್ ಅವರು ಈ ಓವರ್‌ ಮುಂದುವರಿಸಿದರು. ಸನ್‌ರೈಸರ್ಸ್ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದರೂ ಒಂದು ಎಸೆತ ಎದುರಿಸಿ ಔಟಾದರು. ಆಗಲೂ ಕಾಲು ನೋವು ಕಾಡಿತು.

ವಿರಾಟ್ ಸಿಮ್ರನ್‌ಜೀತ್‌; ಎಬಿ ಪಾರಿತೋಷ್‌!
ದುಬೈ:
ಕೊರೊನಾ ತಡೆಗಟ್ಟುವ ಕಾರ್ಯದಲ್ಲಿ ನಿರತರಾಗಿರುವ ‘ಯೋಧ’ರಿಗೆ ಗೌರವ ಸೂಚಿಸುವ ಸಲುವಾಗಿ ಆರ್‌ಸಿಬಿಯ ಕೆಲವು ಆಟಗಾರರು ಹೆಸರು ಬದಲಿಸಿಕೊಂಡು ಸಾಮಾಜಿಕ ತಾಣಗಳಲ್ಲಿ ಗಮನ ಸೆಳೆದಿದ್ದಾರೆ. ವಿರಾಟ್ ಕೊಹ್ಲಿ ಅವರು ಸಿಮ್ರನ್‌ಜೀತ್ ಸಿಂಗ್ ಹೆಸರಿನ ಜೆರ್ಸಿ ಹಾಗೂ ಡಿವಿಲಿಯರ್ಸ್ ಅವರು ಪಾರಿತೋಷ್ ಹೆಸರಿನ ಜೆರ್ಸಿ ತೊಟ್ಟಿರುವ ಚಿತ್ರಗಳನ್ನು ಸಾಮಾಜಿಕ ತಾಣಗಳ ಖಾತೆಗಳ ಪ್ರೊಫೈಲ್ ಚಿತ್ರಗಳನ್ನಾಗಿಸಿಕೊಂಡಿದ್ದಾರೆ.

‘ಲಾಕ್‌ಡೌನ್‌ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗಾಗಿ‘ಪ್ರಾಜೆಕ್ಟ್‌ ಫೀಡಿಂಗ್‌ ಫ್ರಂ ಫಾರ್‌’ ಆರಂಭಿಸಿದ ಪಾರಿತೋಷ್‌ ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರನ್ನು ಪ್ರಶಂಸಿಸುವ ಸಲುವಾಗಿ ಈ ಜೆರ್ಸಿಯನ್ನು ಧರಿಸಿದ್ದೇನೆ’ ಎಂದು ಡಿವಿಲಿಯರ್ಸ್‌ ಬರೆದುಕೊಂಡಿದ್ದಾರೆ.

‘ಸಿಮ್ರನ್‌ಜೀತ್‌ ಅವರಿಗೆ ಕಿವಿ ಕೇಳಿಸುವುದಿಲ್ಲ. ಆದರೆ ವಿಷಮ ಸ್ಥಿತಿಯಲ್ಲಿ ಸಮಾಜಕ್ಕೆ ನೆರವಾಗಲು ಅವರಿಗೆ ಅಡ್ಡಿಯಾಗಲಿಲ್ಲ. ಬಡವರಿಗೆ ನೆರವಾಗಲು ಅವರು ₹ 98 ಸಾವಿರ ಸಂಗ್ರಹಿಸಿದ್ದರು’ ಎಂದು ಆರ್‌ಸಿಬಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.