ADVERTISEMENT

IPL 2025 | SRH vs DC: ಗೆಲುವಿನ ಹಳಿಗೆ ಮರಳಲು ಡೆಲ್ಲಿ ತವಕ

ಪಿಟಿಐ
Published 4 ಮೇ 2025, 23:45 IST
Last Updated 4 ಮೇ 2025, 23:45 IST
ಪ್ಯಾಟ್‌ ಕಮಿನ್ಸ್‌
ಪ್ಯಾಟ್‌ ಕಮಿನ್ಸ್‌   

ಹೈದರಾಬಾದ್‌: ತವರಿನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಮವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದ್ದು, ಗೆಲುವಿನ ಹಳಿಗೆ ಮರಳುವ ಪ್ರಯತ್ನ ನಡೆಸಲಿದೆ. ಸನ್‌ರೈಸರ್ಸ್‌ ತಂಡ ಪ್ಲೇಆಫ್‌ನ ಗುಟುಕು ಆಸೆಗೆ ಜೀವತುಂಬುವ ವಿಶ್ವಾಸದಲ್ಲಿದೆ.

ಕೊನೆಯ ಪಂದ್ಯದಲ್ಲಿ 14 ರನ್‌ಗಳಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ಗೆ ಸೋತಿರುವುದು ಡೆಲ್ಲಿ ಅಭಿಯಾನಕ್ಕೆ ಹಿನ್ನಡೆ ಉಂಟುಮಾಡಿತು. ಆದರೆ ತವರಿನಿಂದಾಚೆಗಿನ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿದ ಪರಿಣಾಮ ಅಕ್ಷರ್ ಪಟೇಲ್ ಬಳಗದ ಪ್ಲೇ ಆಫ್‌ ಆಸೆ ಜೀವಂತವಾಗಿದೆ.

ಏ. 30ರಂದು ಕೆಕೆಆರ್‌ ವಿರುದ್ಧದ ಪಂದ್ಯದ ವೇಳೆ ಎಡಗೈಗೆ ಗಾಯವಾದ ಪರಿಣಾಮ ಅಕ್ಷರ್‌ ಪಟೇಲ್ ಮೈದಾನ ತೊರೆದಿದ್ದರು. ಆದರೆ ಕಳೆದ ಕೆಲವು ದಿನಗಳ ಅವಧಿಯಲ್ಲಿ ಈ ಉತ್ಸಾಹಿ ಆಲ್‌ರೌಂಡರ್‌ ಚೇತರಿಸಿಕೊಂಡಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಗಾಯದ ನಂತರವೂ. ಬ್ಯಾಟಿಂಗ್‌ ವೇಳೆ ಅವರು 23 ಎಸೆತಗಳಲ್ಲಿ 43 ರನ್ ಹೊಡೆದಿದ್ದರು.

ADVERTISEMENT

ಕೊನೆಯ ಐದು ಪಂದ್ಯಗಳಲ್ಲಿ ಮೂರನ್ನು ಸೋತಿರುವ ಡೆಲ್ಲಿ ತಂಡ ಲೀಗ್ ಮುಕ್ತಾಯದ ಹಂತದಲ್ಲಿ ಎಡವಟ್ಟಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಕೋಲ್ಕತ್ತ ವಿರುದ್ಧ ಪಂದ್ಯದಲ್ಲಿ ಆರಂಭ ಆಟಗಾರ ಫ್ಲಾಪ್‌ ಡುಪ್ಲೆಸಿ ಅವರ ಅರ್ಧಶತಕ ತಂಡಕ್ಕೆ ಧೈರ್ಯ ಮೂಡಿಸಿದೆ. 9 ಪಂದ್ಯಗಳಿಂದ 371 ರನ್‌ಗಳೊಡನೆ ತಂಡದ ಯಶಸ್ವಿ ಬ್ಯಾಟರ್‌ ಎನಿಸಿರುವ ಕೆ.ಎಲ್‌.ರಾಹುಲ್ ನಿಧಾನಗತಿಯ ಅಂಕಣಗಳಲ್ಲಿ ರನ್‌ ವೇಗ ಹೆಚ್ಚಿಸುವತ್ತ ಗಮನ ನೀಡಬೇಕಾಗಿದೆ.‌ ಅವರಿಗೆ ಇಲ್ಲಿ ಪ್ಯಾಟ್‌ ಕಮಿನ್ಸ್, ಮೊಹಮ್ಮದ್ ಶಮಿ ಮತ್ತು ಹರ್ಷಲ್ ಪಟೇಲ್ ಅವರ ಸವಾಲು ಇದೆ.

ಅಭಿಷೇಕ್ ಪೊರೆಲ್ ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡಮೊತ್ತವಾಗಿ ಪರಿವರ್ತಿಸುತ್ತಿಲ್ಲ. ಆದರೆ ಡೆಲ್ಲಿ ತಂಡದ ಪ್ರಮುಖ ಅಸ್ತ್ರ ಅದರ ಬೌಲಿಂಗ್‌. ಅನುಭವಿ ಮಿಚೆಲ್ ಸ್ಟಾರ್ಕ್‌, ದುಷ್ಮಂತ ಚಾಮೀರ, ಮುಕೇಶ್‌ ಜೊತೆಗೆ ಸ್ಪಿನ್ನರ್‌ ಕುಲದೀಪ್‌ ಯಾದವ್ ಇದ್ದಾರೆ.

ಸನ್‌ರೈಸರ್ಸ್ ತಂಡದಲ್ಲಿ ಅನುಭವಿಗಳಾದ ಕಮಿನ್ಸ್‌, ಶಮಿ, ಟ್ರಾವಿಸ್‌ ಹೆಡ್‌, ಇಶಾನ್‌ ಕಿಶನ್‌, ಹೆನ್ರಿಚ್‌ ಕ್ಲಾಸೆನ್‌ ಮತ್ತು ಜೈದೇವ್ ಉನದ್ಕತ್‌ ಇದ್ದರೂ ತಂಡವು ಈ ಋತುವಿನಲ್ಲಿ ಪರದಾಡಿದ್ದೇ ಹೆಚ್ಚು. ಶುಕ್ರವಾರ ಗುಜರಾತ್ ಟೈಟನ್ಸ್ ಎದುರಿನ ಸೋಲು ತಂಡದ ಪ್ಲೇಆಫ್‌ ಆಸೆಯನ್ನು ಬಹುತೇಕ ಭಗ್ನಗೊಳಿಸಿದೆ.

ಪಂದ್ಯ ಆರಂಭ: ರಾತ್ರಿ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.