ವಿರಾಟ್ ಕೊಹ್ಲಿ (ಒಳಚಿತ್ರ – ಮೈದಾನಕ್ಕೆ ನುಗ್ಗಿ ವಿರಾಟ್ ಕಾಲಿಗೆ ನಮಿಸುತ್ತಿರುವ ಅಭಿಮಾನಿ)
ನದೆಹಲಿ: ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ ವಿರಾಟ್ ಕೊಹ್ಲಿ ಅವರು ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಕ್ರಿಕೆಟ್‌ಗೆ ಮರಳಿದ್ದಾರೆ. ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಹಾಗೂ ರೈಲ್ವೇಸ್ ನಡುವಣ ಪಂದ್ಯವು, ಕೊಹ್ಲಿ ಪುನರಾಗಮನಕ್ಕೆ ವೇದಿಕೆಯಾಗಿದೆ.
ಟಾಸ್ ಗೆದ್ದಿರುವ ದೆಹಲಿ ತಂಡದ ನಾಯಕ ಆಯುಷ್ ಬದೋನಿ ಬೌಲಿಂಗ್ ಆಯ್ದುಕೊಂಡಿದ್ದಾರೆ.
24 ಓವರ್‌ಗಳ ಅಂತ್ಯಕ್ಕೆ ರೈಲ್ವೇಸ್ ಪಡೆ, 5 ವಿಕೆಟ್‌ಗಳನ್ನು ಕಳೆದುಕೊಂಡು 80 ರನ್ ಕಲೆಹಾಕಿದೆ. ಅಗ್ರ ಕ್ರಮಾಂಕದ ಅಂಚಿತ್ ಯಾದವ್ (7), ವಿವೇಕ್ ಸಿಂಗ್ (0) ಹಾಗೂ ನಾಯಕ ಸುರಾಜ್ ಅಹುಜಾ (3) ಹೆಚ್ಚು ಹೊತ್ತು ನಿಲ್ಲಲಿಲ್ಲ.
ಉಪೇಂದ್ರ ಯಾದವ್ ಜೊತೆಗೂಡಿ ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 45 ರನ್ ಕಲೆಹಾಕಿ, ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದ ಮೊಹಮ್ಮದ್ ಸೈಫ್ 24 ರನ್ ಗಳಿಸಿ ಔಟಾಗಿದ್ದಾರೆ. ಭಾರ್ಗವ್ ಮೆರೈ ಖಾತೆ ತೆರೆಯದೆ ಮರಳಿದ್ದಾರೆ.
ಸದ್ಯ 21 ರನ್ ಗಳಿಸಿರುವ ಉಪೇಂದ್ರ ಹಾಗೂ ಕರಣ್ ಶರ್ಮಾ (1 ರನ್) ಕ್ರೀಸ್‌ನಲ್ಲಿದ್ದಾರೆ.
ದೆಹಲಿ ಪರ ಸಿದ್ಧಾರ್ಥ್ ಶರ್ಮಾ, ಮೋನಿ ಗೆರ್ವಾಲ್ ತಲಾ ಎರಡು ಹಾಗೂ ನವದೀಪ್ ಶೈನಿ ಒಂದು ವಿಕೆಟ್ ಉರುಳಿಸಿದ್ದಾರೆ.
ಕಾಲಿಗೆರಗಿದ ಅಭಿಮಾನಿ
ಪಂದ್ಯದ ನಡುವೆಯೇ ಭದ್ರತಾ ಸಿಬ್ಬಂದಿಯನ್ನು ದಾಟಿ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ, ಸ್ಪಿಪ್‌ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಅವರ ಬಳಿಗೆ ಓಡೋಡಿ ಬಂದು ಕಾಲಿಗೆ ಎರಗಿದ್ದಾನೆ. ಭದ್ರತಾ ಸಿಬ್ಬಂದಿ ಕೂಡಲೇ, ಆತನನ್ನು ಹೊರಗೆ ಎಳೆದೊಯ್ದಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವಿರಾಟ್, ಕಣಕ್ಕಿಳಿದಿರುವುದು ದೆಹಲಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. 2012ರ ಬಳಿಕ ಮೊದಲ ಬಾರಿಗೆ ರಣಜಿಯಲ್ಲಿ ಆಡುತ್ತಿರುವ ಕೊಹ್ಲಿಯ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರೇಕ್ಷಕರು ಕ್ರೀಡಾಂಗಣದತ್ತ ಬರುತ್ತಿದ್ದಾರೆ. ಆದರೆ, ಸದ್ಯ ಚಾಲ್ತಿಯಲ್ಲಿರುವ ರೈಲ್ವೇಸ್ ಇನಿಂಗ್ಸ್ ಮುಗಿಯುವವರೆಗೆ ಕಾಯಬೇಕಿದೆ.
ಪಂದ್ಯ ಆರಂಭಕ್ಕೂ ಮುನ್ನ, ಅಭಿಮಾನಿಗಳು ಕ್ರೀಡಾಂಗಣದ ಹೊರಗೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿರುವುದು, ಎರಡು ಕಿ.ಮೀ. ವರೆಗೆ ಸಾಲಿನಲ್ಲಿ ನಿಂತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.