ADVERTISEMENT

ರಾಜಸ್ಥಾನ ವಿರುದ್ಧವೂ ಪಡಿಕ್ಕಲ್ ಅಮೋಘ ಬ್ಯಾಟಿಂಗ್: ಹೊಸ ದಾಖಲೆ ಬರೆದ ಕನ್ನಡಿಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2026, 6:43 IST
Last Updated 6 ಜನವರಿ 2026, 6:43 IST
<div class="paragraphs"><p>ದೇವುದತ್ತ ಪಡಿಕ್ಕಲ್</p></div>

ದೇವುದತ್ತ ಪಡಿಕ್ಕಲ್

   

ಚಿತ್ರ: @the_sports_x

ಅಹಮದಾಬಾದ್: ಇಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕ ಹಾಗೂ ರಾಜಸ್ಥಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಕರ್ನಾಟಕದ ಆರಂಭಿಕ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಮತ್ತೊಂದು ಅದ್ಭುತ ಇನಿಂಗ್ಸ್ ಆಡಿದ್ದು, ಕೇವಲ 9 ರನ್‌ಗಳಿಂದ ಶತಕ ವಂಚಿತರಾದರು.

ADVERTISEMENT

ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಮೋಘ ಲಯದಲ್ಲಿರುವ ಪಡಿಕ್ಕಲ್ ಅವರು, ಕಳೆದ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದಾರೆ. ಮಾತ್ರವಲ್ಲ, 6ನೇ ಪಂದ್ಯದಲ್ಲಿ ಕೂಡ ಸ್ಫೋಟಕ 91 ರನ್ ಕಲೆಹಾಕುವ ಮೂಲಕ ಗಮನಸೆಳೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ನಾಯಕ ಮಯಂಕ್ ಅಗರವಾಲ್ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 184 ರನ್‌ಗಳ ಜೊತೆಯಾಟ ಆಡಿದರು. ಈ ಹಂತದ‌ಲ್ಲಿ 82 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 91 ರನ್ ಗಳಿಸಿದ್ದ ಪಡಿಕ್ಕಲ್ ಅವರು ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಅವರಿಗೆ ವಿಕೆಟ್ ಒಪ್ಪಿಸಿ ಶತಕದಿಂದ ವಂಚಿತರಾದರು.

ಶತಕ ಸಿಡಿಸಿರುವ ನಾಯಕ ಮಯಂಕ್ ಅಗರವಾಲ್ ಅವರು ಇನಿಂಗ್ಸ್ ಮುಂದುವರೆಸಿದ್ದಾರೆ.

ಮೂರು ಆವೃತ್ತಿಗಳಲ್ಲಿ 600ಕ್ಕೂ ಅಧಿಕ ರನ್

ದೇವದತ್ತ ಪಡಿಕ್ಕಲ್ ಅವರು 2018ರಲ್ಲಿ ವಿಜಯ್ ಹಜಾರೆ ಟ್ರೋಫಿ ಮೂಲಕ ಲಿಸ್ಟ್ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು 2019–20ನೇ ಸಾಲಿನ ತಮ್ಮ ಎರಡನೇ ಆವೃತ್ತಿಯಲ್ಲಿ 11 ಇನಿಂಗ್ಸ್‌ಗಳಿಂದ 609 ರನ್‌ ಗಳಿಸಿದರು. ನಂತರ 2020-21 ಆವೃತ್ತಿಯಲ್ಲಿ 8 ಇನಿಂಗ್ಸ್‌ಗಳಿಂದ ಸತತ 4 ಶತಕ ಸಹಿತ 737 ರನ್ ಕಲೆಹಾಕಿದರು.

ಈ ಬಾರಿಯು ಕೂಡ ಅವರು ಆಡಿರುವ 6 ಇನಿಂಗ್ಸ್‌ಗಳಿಂದ ಈಗಾಗಲೇ 600ಕ್ಕೂ ಅಧಿಕ ರನ್ ದಾಖಲಿಸಿ ಮುನ್ನುಗ್ಗುತ್ತಿದ್ದಾರೆ. ಆ ಮೂಲಕ ವಿಜಯ್ ಹಜಾರೆ ಟ್ರೋಫಿಯ ಇತಿಹಾಸದಲ್ಲಿ ಮೂರು ಆವೃತ್ತಿಗಳಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದರು.

ಕಳೆದ 6 ಇನಿಂಗ್ಸ್‌ಗಳಲ್ಲಿ ಪಡಿಕ್ಕಲ್ ಬ್ಯಾಟಿಂಗ್

  • ಜಾರ್ಖಂಡ್ ವಿರುದ್ಧ 147 ರನ್

  • ಕೇರಳ ವಿರುದ್ಧ 124 ರನ್

  • ತಮಿಳುನಾಡು ವಿರುದ್ಧ 22 ರನ್

  • ಪಾಂಡಿಚೇರಿ ವಿರುದ್ಧ 113 ರನ್

  • ತ್ರಿಪುರ ವಿರುದ್ಧ 108 ರನ್

  • ರಾಜಸ್ಥಾನ ವಿರುದ್ಧ 91 ರನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.