ಕೋಲ್ಕತ್ತ: ಮಹೇಂದ್ರ ಸಿಂಗ್ ಧೋನಿ ಅವರು ಪ್ರಸಿದ್ಧ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಕೊನೆಯ ಬಾರಿ ಆಡುವುದು ಬಹುತೇಕ ಖಚಿತವಾಗಿದೆ. ಅವರ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬುಧವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆಡಲಿದೆ.
ಆದರೆ ಈ ಮುಖಾಮುಖಿ ಪ್ಲೇ ಆಫ್ ದೃಷ್ಟಿಯಿಂದ ಅಜಿಂಕ್ಯ ರಹಾನೆ ಪಡೆಗೆ ಮಾಡು–ಇಲ್ಲವೇ– ಮಡಿ ಪಂದ್ಯವಾಗಿದೆ. ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಕೆಕೆಆರ್‌ಗೆ ಇದು ತವರು ಮೈದಾನ. ಆದರೆ ಭಾರತೀಯ ಕ್ರಿಕೆಟ್‌ನ ಹೆಗ್ಗುರುತಾದ ಈಡನ್‌ನಲ್ಲಿ ಧೋನಿ ಉಪಸ್ಥಿತಿ ಕ್ರೀಡಾಂಗಣಕ್ಕೆ ಸಿಎಸ್‌ಕೆಯ ಹಳದಿ ರಂಗು ಬಳಿಯುವ ಸಾಧ್ಯತೆ ದಟ್ಟವಾಗಿದೆ.
43 ವರ್ಷ ವಯಸ್ಸಿನ ಧೋನಿ ಅವರಿಗೆ ಈ ಊರಿನ ಜೊತೆ ಭಾವನಾತ್ಮಕ ನಂಟು ಇದೆ. ಕೋಲ್ಕತ್ತ ಅವರ ಪತ್ನಿಯ ತವರು. ಈ ಮಹಾನಗರದಲ್ಲೇ ಅವರು ಜೂನಿಯರ್, ಕ್ಲಬ್ ಕ್ರಿಕೆಟ್ ಆಡಿ ಬೆಳೆದವರು. ಹೀಗಾಗಿ ಬುಧವಾರ ಪಂದ್ಯ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಬಹುದು.
ಈಡನ್‌ನಲ್ಲಿ ಅವರು ಮೈಲಿಗಲ್ಲಿನ ಕ್ಷಣಗಳನ್ನೂ ಕಂಡಿದ್ದಾರೆ. ಮೊದಲ ಪ್ರಥಮ ದರ್ಜೆ ಶತಕ ಬಾರಿಸಿದ್ದು ಇಲ್ಲಿಯೇ. ಆರು ಟೆಸ್ಟ್ ಶತಕಗಳ ಪೈಕಿ ಎರಡನ್ನು ಇದೇ ಕ್ರೀಡಾಂಗಣದಲ್ಲಿ ಬಾರಿಸಿದ್ದಾರೆ. ಶಾಮಬಜಾರ್ ಕ್ಲಬ್ ಪರ ಪಿ.ಸೇನ್ ಟ್ರೋಫಿ ಕ್ರಿಕೆಟ್ ಫೈನಲ್ ಕೂಡ ಆಡಿದ್ದಾರೆ. ಮೇ 7ರಂದು ಏಳನೇ ನಂಬರ್ ಪೋಷಾಕು ಧರಿಸಿ ಕೊನೆಯ ಬಾರಿ ಈ ಚಾರಿತ್ರಿಕ ಕ್ರೀಡಾಂಗಣದಲ್ಲಿ ಇಳಿಯುವರೆಂಬ ಭಾವನೆ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಈ ಹಿಂದೆ ತಂಡವನ್ನು ಫಿನಿಷರ್ ಆಗಿ ಗೆಲ್ಲಿಸುತ್ತಿದ್ದ ಧೋನಿಯಾಗಿ ಅವರು ಈಗ ಉಳಿದಿಲ್ಲ. ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 214 ರನ್ ಗುರಿ ಬೆನ್ನಟ್ಟುವಾಗ 2 ವಿಕೆಟ್‌ಗೆ 172 ರನ್‌ಗಳೊಡನೆ ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ನಂತರ ಎರಡು ರನ್ ಕೊರತೆ ಕಂಡು ಸೋಲನುಭವಿಸಿತು. 8 ಎಸೆತಕ್ಕೆ 12 ರನ್ ಬಾರಿಸಿದ್ದ ಧೋನಿ ಸೋಲಿನ ಹೊಣೆ ಹೊತ್ತುಕೊಂಡರು.
ಮಹತ್ವದ ಪಂದ್ಯ:
ಈ ಪಂದ್ಯ ಕೆಕೆಆರ್ ಪಾಲಿಗೆ ಮತಹ್ವದ್ದು. ಪ್ಲೇ ಆಫ್‌ನಲ್ಲಿ ಉಳಿಯಬೇಕಾದರೆ ಉಳಿದ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಕೋಲ್ಕತ್ತದ ತಂಡಕ್ಕಿದೆ. ಈಗ 11 ಅಂಕ ಗಳಿಸಿರುವ ಕೋಲ್ಕತ್ತ ಈ ಮೂರೂ ಪಂದ್ಯ ಗೆದ್ದರೆ 17 ಅಂಕ ಗಳಿಸಿಬಲ್ಲದು. ಆಗಲೂ ಸಹ ನಿವ್ವಳ ರನ್ ದರ ಗಣನೆಗೆ ಬರಬಹುದು.
ಕೊನೆಯ ಪಂದ್ಯವನ್ನು ಒಂದು ರನ್ನಿಂದ ಗೆದ್ದ ಕೋಲ್ಕತ್ತ ತಂಡವು ಸನ್‌ರೈಸರ್ಸ್ ಮತ್ತು ಆರ್‌ಸಿಬಿ ವಿರುದ್ಧ ಪಂದ್ಯಗಳನ್ನು ತವರಿನಿಂದಾಚೆ ಆಡಬೇಕಿದೆ. ರಸೆಲ್ ಮಿಂಚಿನ ಆಟ ಆಡಿರುವುದು ತಂಡಕ್ಕೆ ಬಲ ನೀಡಿದೆ. ಆದರೆ ‘ದುಬಾರಿ ಆಟಗಾರ’ ವೆಂಕಟೇಶ ಅಯ್ಯರ್ ಇನ್ನೂ ಮಿಂಚಿಲ್ಲ.
ಸಿಎಸ್‌ಕೆ ತಂಡ ಎದುರಾಳಿಗೆ ಸುಲಭ ತುತ್ತಾಗಲಾರದು. ಯುವ ಆಟಗಾರ ಆಯುಷ್ ಮ್ಹಾತ್ರೆ, ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ 48 ಎಸೆಗಳಲ್ಲಿ 94 ರನ್ ಚಚ್ಚಿ ಸ್ವಲ್ಪದರಲ್ಲಿ ಶತಕ ಕಳೆದುಕೊಂಡಿದ್ದರು. ಋತುರಾಜ್ ಗಾಯಕವಾಡ ಸ್ಥಾನಕ್ಕೆ ಬಂದಿರುವ 17 ವರ್ಷ ವಯಸ್ಸಿನ ಆಯುಷ್ ಭರವಸೆ ಮೂಡಿಸಿದ್ದಾರೆ. ಮುಂಬೈ ವಿರುರ್ದ್ಧ 15 ಎಸೆತಗಳಲ್ಲಿ 32 ರನ್ ಸಿಡಿಸಿದ್ದರು.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೊ ಹಾಟ್‌ಸ್ಟಾರ್ ಆ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.