ದಿಗ್ವೇಶ್ ರಾಠಿ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧವೂ 'ಟಿಕ್ ದಿ ನೋಟ್‌ಬುಕ್' ಸಂಭ್ರಮವನ್ನು ಆಚರಿಸಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ಲೆಗ್ ಸ್ಪಿನ್ನರ್ ದಿಗ್ವೇಶ್ ರಾಠಿ ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನೋಟ್‌ಬುಕ್ ಸಂಭ್ರಮದ ಮೂಲಕ ಪರ ಹಾಗೂ ವಿರೋಧ ಅಭಿಮಾನಿಗಳನ್ನು ಕಟ್ಟಿಕೊಂಡಿರುವ ದಿಗ್ವೇಶ್ ಈಗಾಗಲೇ ತಮ್ಮ ಅಶಿಸ್ತಿನ ವರ್ತನೆಗಾಗಿ ಐಪಿಎಲ್‌ನಿಂದ ದಂಡನೆಗೂ ಒಳಗಾಗಿದ್ದಾರೆ.
ಪಂದ್ಯದ ನಿರ್ಣಾಯಕ ಹಂತದಲ್ಲಿ ಆರ್‌ಸಿಬಿ ತಂಡದ ಉಸ್ತುವಾರಿ ನಾಯಕ ಜಿತೇಶ್ ಶರ್ಮಾ 49 ರನ್ ಗಳಿಸಿದ್ದಾಗ ಅವರನ್ನು ಔಟ್ ಮಾಡುವಲ್ಲಿ ದಿಗ್ವೇಶ್ ಯಶಸ್ವಿಯಾಗಿದ್ದರು. ತಕ್ಷಣವೇ ಎಂದಿನಂತೆ ಮೈದಾನದಲ್ಲಿ ಸಹಿ ಹಾಕುವ ಮೂಲಕ ನೋಟ್‌ಬುಕ್ ಸಂಭ್ರಮವನ್ನು ಆಚರಿಸಿದರು.
ಆದರೆ ಆ ಎಸೆತ ನೋ ಬಾಲ್ ಆಗಿದ್ದರಿಂದ ಜಿತೇಶ್ ಜೀವದಾನ ಪಡೆದರು. ಇದರಿಂದ ದಿಗ್ವೇಶ್ ತೀವ್ರ ನಿರಾಸೆಗೆ ಒಳಗಾದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಟ್ರೋಲ್‌ಗೆ ಒಳಪಡಿಸಲಾಗಿದೆ. ದಿಗ್ವೇಶ್ ರಾಠಿ ಚೆಕ್ ಬೌನ್ಸ್ ಆಯಿತು ಎಂದು ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ.
ಆನಂತರದ ಪ್ರಕರಣದಲ್ಲಿ ಜಿತೇಶ್ ಶರ್ಮಾ ಅವರನ್ನು ದಿಗ್ವೇಶ್ ರಾಠಿಯವರು 'ನಾನ್‌ಸ್ಟ್ರೈಕರ್ ರನ್‌ಔಟ್' ಮಾಡಲು ಯತ್ನಿಸಿದರು. ಮೂರನೇ ಅಂಪೈರ್ ಮರುಪರಿಶೀಲನೆಯಲ್ಲಿ ಜಿತೇಶ್ ಅವರು ಕ್ರೀಸ್ ದಾಟುವ ಮುನ್ನ ದಿಗ್ವೇಶ್ ಹೆಜ್ಜೆ (ಸ್ಟ್ರೈಡ್) ಪೂರ್ಣಗೊಳಿಸಿದ್ದರು. ಆದ್ದರಿಂದ ಮೂರನೇ ಅಂಪೈರ್ ಕೂಡ ನಾಟ್‌ಔಟ್ ತೋರಿಸಿದರು. ಆದರೆ ಈ ಹೊತ್ತಿನಲ್ಲಿಯೇ ಪಂತ್ ಅವರು ಮನವಿಯನ್ನು ಹಿಂಪಡೆದರು. ಆ ಮೂಲಕ ದಿಗ್ವೇಶ್ ಮಗದೊಮ್ಮೆ ಮುಜುಗರಕ್ಕೆ ಒಳಗಾದರು.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ತಾವು ಪಡೆಯುವ ಸಂಭಾವನೆಯಲ್ಲಿ ಬಹುಪಾಲನ್ನು ಭಾರಿ ದಂಡ ತೆರುವ ಮೂಲಕ ಕಳೆದುಕೊಂಡಿರುವ ದಿಗ್ವೇಶ್ ವರ್ತನೆ ಮೈದಾನದ ಒಳಗೆ ಹಾಗೂ ಹೊರಗಡೆ ಹೆಚ್ಚಿನ ಚರ್ಚೆಗೆ ಗ್ರಾಸವಾಯಿತು.
ಈ ಎರಡೂ ಘಟನೆಗಳ ವಿಡಿಯೊವನ್ನು ಬಿಸಿಸಿಐ ಹಂಚಿಕೊಂಡಿದ್ದು, ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ಕಿಸಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.