ವಿರಾಟ್ ಕೊಹ್ಲಿ (ಬಲಬದಿ)
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 'ಎ' ಗುಂಪಿನ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ಬಳಿಕ ಟೀಮ್ ಇಂಡಿಯಾ ಡ್ರೆಸ್ಸಿಂಗ್ ಕೊಠಡಿಯಲ್ಲಿ ಕುತೂಹಲಕಾರಿ ಸನ್ನಿವೇಶ ಸೃಷ್ಟಿಯಾಗಿತ್ತು.
ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಸಿಗಬೇಕಿದ್ದ 'ಅತ್ಯುತ್ತಮ ಫೀಲ್ಡರ್' ಮೆಡಲ್ ಅನ್ನು ಸಹ ಆಟಗಾರರು ಅಡಗಿಸಿಟ್ಟಿದ್ದರಿಂದ ಸ್ವಲ್ಪ ಹೊತ್ತು ರೋಚಕ ಕ್ಷಣ ಸೃಷ್ಟಿಯಾಗಿತ್ತು.
ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಎಂದಿನಂತೆ ಪಂದ್ಯದಲ್ಲಿ ಅತ್ಯುತ್ತಮ ಕ್ಷೇತ್ರರಕ್ಷಣೆ ಮಾಡಿದ ಆಟಗಾರರ ಹೆಸರುಗಳನ್ನು ಪ್ರಕಟಿಸಿದರು. ಅಕ್ಷರ್ ಪಟೇಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಹೆಸರುಗಳನ್ನು ದಿಲೀಪ್ ಸೂಚಿಸಿದರು.
ಬಳಿಕ ವಿಜೇತರ ಹೆಸರನ್ನು ಘೋಷಿಸಲು ಥ್ರೋಡೌನ್ ಪರಿಣತ ಶ್ರೀಲಂಕಾದ ನುವಾನ್ ಸೆನೆವಿರತ್ನೆ ಅವರನ್ನು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮೆಡಲ್ ಅಡಗಿಸಿಟ್ಟಿರುವ ವಿಚಾರ ಬೆಳಕಿಗೆ ಬಂತು. ಎಲ್ಲ ಆಟಗಾರರು ಪರಸ್ಪರ ಮೆಡಲ್ ಎಲ್ಲಿ ಎಂದು ಪರಸ್ಪರ ವಿಚಾರಿಸತೊಡಗಿದರು.
ಫೀಲ್ಡಿಂಗ್ ಕೋಚ್ ದಿಲೀಪ್ ಅವರಿಗೆ ಅಕ್ಷರ್ ಪಟೇಲ್ ಹಾಗೂ ಮೊಹಮ್ಮದ್ ಶಮಿ ಮೇಲೆ ಅನುಮಾನ ಮೂಡಿತು. ಈ ಸಂದರ್ಭದಲ್ಲಿ ಅಕ್ಷರ್, 'ಮೆಡಲ್ ಇಲ್ಲ. ಎಲ್ಲಿದೆ' ಎಂದು ಪ್ರಶ್ನಿಸಿದರು. ಮತ್ತೊಂದೆಡೆ ಶಮಿ ಕೂಡ ಅಡಗಿಸಿಟ್ಟ ವಿಚಾರವನ್ನು ನಿರಾಕರಿಸಿದರು.
ಕೊನೆಗೆ ಅಕ್ಷರ್ ಪಟೇಲ್ ಮೆಡಲ್ ಅನ್ನು ಫೀಲ್ಡಿಂಗ್ ಕೋಚ್‌ಗೆ ಹಸ್ತಾಂತರಿಸಿದರು. ಬಳಿಕ ನುವಾನ್ ಅದನ್ನು ವಿರಾಟ್ ಕೊರಳಿಗೆ ಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಆಟಗಾರರೆಲ್ಲ ನಗುವಿನ ಅಲೆಯಲ್ಲಿ ತೇಲಾಡಿದರು.
2023ರ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಫೀಲ್ಡಿಂಗ್ ಮೆಡಲ್ ನೀಡುವ ಸಂಪ್ರದಾಯವನ್ನು ಟೀಮ್ ಇಂಡಿಯಾದಲ್ಲಿ ರೂಢಿಸಿಕೊಂಡು ಬರಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.