ADVERTISEMENT

ಮಹಿಳಾ ಕ್ರಿಕೆಟ್ | 5ನೇ ಟಿ20 ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್; ಭಾರತಕ್ಕೆ ಸರಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2025, 2:18 IST
Last Updated 13 ಜುಲೈ 2025, 2:18 IST
<div class="paragraphs"><p>ಸೋಫಿಯಾ ಡಂಕ್ಲೇ ಬ್ಯಾಟಿಂಗ್‌ ವೈಖರಿ</p></div>

ಸೋಫಿಯಾ ಡಂಕ್ಲೇ ಬ್ಯಾಟಿಂಗ್‌ ವೈಖರಿ

   

ಕೃಪೆ: ರಾಯಿಟರ್ಸ್‌

ಎಜ್‌ಬಾಸ್ಟನ್‌: ಭಾರತದ ವಿರುದ್ಧ ನಡೆದ ಐದು ಪಂದ್ಯಗಳ ಮಹಿಳಾ ಟಿ20 ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ಜಯದ ನಗೆ ಬೀರಿದೆ. ಆದಾಗ್ಯೂ, ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಆಂಗ್ಲರ ನೆಲದಲ್ಲಿ ಟಿ20 ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. 

ADVERTISEMENT

ಎಜ್‌ಬಾಸ್ಟನ್‌ನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಶೆಫಾಲಿ ವರ್ಮಾ ಗಳಿಸಿದ ಅರ್ಧಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 167 ರನ್‌ ಗಳಿಸಿತ್ತು. ಇಂಗ್ಲೆಂಡ್‌ ಈ ಗುರಿಯನ್ನು ಅಂತಿಮ ಎಸೆತದಲ್ಲಿ ಮುಟ್ಟಿ ಸಂಭ್ರಮಿಸಿತು.

ಸ್ಪರ್ಧಾತ್ಮಕ ಮೊತ್ತದೆದುರು ಇನಿಂಗ್ಸ್‌ ಆರಂಭಿಸಿದ ಸೋಫಿಯಾ ಡಂಕ್ಲೇ (46 ರನ್‌) ಹಾಗೂ ಡೆನಿಯಲ್‌ ವ್ಯಾಟ್‌ (56 ರನ್‌) ಜೋಡಿ, ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿತು. ಕೇವಲ 10.4 ಓವರ್‌ಗಳಲ್ಲೇ 101 ರನ್‌ ಸಿಡಿಸಿ ಸುಲಭ ಜಯದ ನಿರೀಕ್ಷೆ ಮೂಡಿಸಿತ್ತು. ಆದರೆ, ಹರ್ಮನ್‌ಪ್ರೀತ್‌ ಕೌರ್‌ ಪಡೆ ಅಷ್ಟು ಸುಲಭಕ್ಕೆ ಮಣಿಯಲಿಲ್ಲ.

ರಾಧಾ ಯಾದವ್ ಹಾಗೂ ದೀಪ್ತಿ ಶರ್ಮಾ, ಆರಂಭಿಕರಿಬ್ಬರನ್ನೂ 6 ರನ್‌ ಅಂತರದಲ್ಲಿ ಔಟ್‌ ಮಾಡಿದರು. ನಂತರ ಬಂದ ಮಾಯಾ ಬೌಚಿಯರ್ (16) ಕೂಡ ಬೇಗನೆ ಔಟಾದರು. ಹೀಗಾಗಿ, ಆತಿಥೇಯರ ರನ್ ಗಳಿಕೆ ವೇಗ ಕುಸಿಯಿತು.

ಲಾಸ್ಟ್‌ ಓವರ್‌ 'ಡ್ರಾಮಾ'
ಟಾಮಿ ಬ್ಯೂಮೌಂಟ್‌ ಪಡೆಗೆ ಗೆಲ್ಲಲು ಕೊನೇ ಓವರ್‌ನಲ್ಲಿ ಕೇವಲ 6 ರನ್‌ ಬೇಕಿತ್ತು. 30 ರನ್‌ ಗಳಿಸಿದ್ದ ಟಾಮಿ ಹಾಗೂ ಆ್ಯಮಿ ಜೋನ್ಸ್‌ (10 ರನ್‌) ಕ್ರೀಸ್‌ನಲ್ಲಿದ್ದರು. ಅಂತಿಮ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಕೇವಲ 1 ರನ್‌ ನೀಡಿದ ಅರುಂಧತಿ ರೆಡ್ಡಿ, ಟಾಮಿ ಹಾಗೂ ಆ್ಯಮಿ ಇಬ್ಬರನ್ನೂ ಪೆವಿಲಿಯನ್‌ಗೆ ಅಟ್ಟಿದರು. ಹೀಗಾಗಿ ಕೊನೆಯ ಮೂರು ಎಸೆತಗಳಲ್ಲಿ 5 ರನ್‌ ಗಳಿಸುವ ಒತ್ತಡ ಆತಿಥೇಯರ ಮೇಲಿತ್ತು.

ಆ ಸವಾಲನ್ನು ಮೀರಿದ ಸೋಫಿ ಎಕ್ಲೆಸ್ಟೊನ್ (4 ರನ್‌) ಜಯದ ರನ್ ಗಳಿಸಿದರು. ಇದರೊಂದಿಗೆ ಆಂಗ್ಲರ ಪಡೆ, ಸರಣಿ ಸೋಲಿನ ಅಂತರವನ್ನು 2–3ರ ಅಂತರಕ್ಕೆ ತಗ್ಗಿಸಿಕೊಂಡಿತು.

ಪಂದ್ಯದಲ್ಲಿ ಇಂಗ್ಲೆಂಡ್‌ ಪರ ಪ್ರಮುಖ ಮೂರು ವಿಕೆಟ್‌ ಪಡೆದು ಮಿಂಚಿದ ಚಾರ್ಲಿ ಡೀನ್‌ 'ಪಂದ್ಯ ಶ್ರೇಷ್ಠ' ಆಟಗಾರ್ತಿ ಎನಿಸಿದರು. ಟೂರ್ನಿಯಲ್ಲಿ ಒಟ್ಟು 10 ವಿಕೆಟ್‌ಗಳನ್ನು ಪಡೆದು, ಭಾರತ ಐತಿಹಾಸಿಕ ಜಯ ಸಾಧಿಸಲು ನೆರವಾದ ಶ್ರೀಚರಣಿ 'ಸರಣಿ ಶ್ರೇಷ್ಠ' ಆಟಗಾರ್ತಿ ಗೌರವಕ್ಕೆ ಭಾಜನರಾದರು.

ಶೆಫಾಲಿ ಬೀಸಾಟ
ಇದಕ್ಕೂ ಮೊದಲು ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸ್ಮೃತಿ ಮಂದಾನ (8 ರನ್‌), ಜೆಮಿಮಾ ರಾಡ್ರಿಗಸ್‌ (1 ರನ್‌), ಹರ್ಮನ್‌ಪ್ರೀತ್‌ ಕೌರ್‌ (15 ರನ್‌), ಹರ್ಲೀನ್‌ ಡಿಯೋಲ್‌ (4 ರನ್‌) ದೀಪ್ತಿ ಶರ್ಮಾ (7 ರನ್‌) ನಿರೀಕ್ಷಿತ ಆಟವಾಡಲಿಲ್ಲ.

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಬೀಸಾಟವಾಡಿದ ಶೆಫಾಲಿ 41 ಎಸೆತಗಳಲ್ಲಿ 75 ರನ್‌ ಬಾರಿಸಿದರು. ಅವರ ಇನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಇದ್ದವು. ಕೊನೆಯಲ್ಲಿ ರಿಚಾ ಘೋಷ್‌ (24 ರನ್‌) ಉಪಯುಕ್ತ ಆಟವಾಡಿದ್ದರಿಂದ ತಂಡದ ಮೊತ್ತ 160ರ ಗಡಿ ದಾಟಲು ಸಾದ್ಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.