ADVERTISEMENT

ವಿರಾಟ್–ಎಬಿಡಿ ಸ್ನೇಹ

ಗಿರೀಶದೊಡ್ಡಮನಿ
Published 13 ಅಕ್ಟೋಬರ್ 2020, 19:30 IST
Last Updated 13 ಅಕ್ಟೋಬರ್ 2020, 19:30 IST
ಎಬಿ ಡಿವಿಲಿಯರ್ಸ್ ವಿರಾಟ್ ಕೊಹ್ಲಿ
ಎಬಿ ಡಿವಿಲಿಯರ್ಸ್ ವಿರಾಟ್ ಕೊಹ್ಲಿ   

‘ಮಾಮರವೆಲ್ಲೋ..ಕೋಗಿಲೆಯೆಲ್ಲೋ..ಏನೀ ಸ್ನೇಹ ಸಂಬಂಧ ..’

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಸ್ನೇಹವನ್ನು ನೋಡಿದಾಗಲೆಲ್ಲ, ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಈ ಗೀತೆ ನೆನಪಾಗುತ್ತದೆ.

ದೇಶ, ಭಾಷೆ, ವಯಸ್ಸು, ಅನುಭವ, ಸಾಧನೆಗಳಲ್ಲಿ ಇಬ್ಬರಿಗೂ ವ್ಯತ್ಯಾಸಗಳಿವೆ. ಆದರೂ ಇವರ ಸ್ನೇಹದ ಸವಿ ಕ್ರಿಕೆಟ್‌ಪ್ರಿಯರಿಗೆ ಇಷ್ಟ. 2004ರಲ್ಲಿಯೇ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಎಬಿಡಿ, ವಿರಾಟ್ ಭಾರತ ತಂಡಕ್ಕೆ ಕಾಲಿಡುವ ಮುನ್ನವೇ ದಿಗ್ಗಜರ ಜತೆ ಗುರುತಿಸಿಕೊಂಡು ಇದ್ದವರು. ತಮ್ಮ ವಿಶಿಷ್ಟ ಶೈಲಿಯ ಬ್ಯಾಟಿಂಗ್ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ವಿಕೆಟ್‌ಕೀಪಿಂಗ್, ಫೀಲ್ಡಿಂಗ್ ಗಳಿಂದಾಗಿ ದಕ್ಷಿಣ ಆಫ್ರಿಕಾ ತಂಡದ ಅವಿಭಾಜ್ಯ ಅಂಗವೇ ಆಗಿದ್ದರು.

ADVERTISEMENT

2008ರಲ್ಲಿ ಐಪಿಎಲ್ ಆರಂಭವಾದಾಗ ಕೊಹ್ಲಿ ಆರ್‌ಸಿಬಿಯಲ್ಲಿ ಸ್ಥಾನ ಪಡೆದಿದ್ದರು. 2011ರಲ್ಲಿ ಅರ್‌ಸಿಬಿಗೆ ಎಬಿಡಿ ಸೇರ್ಪಡೆಯಾಗಿದ್ದರು.ಎಬಿಡಿಯೇ ಹೇಳುವಂತೆ ಮೊದಲು ವಿರಾಟ್ ಜೊತೆಗೆ ಹೆಚ್ಚು ನಂಟಿರಲಿಲ್ಲ. ಆದರೆ ಅವರ ಬಗ್ಗೆ ಒಂದಿಷ್ಟು ವಿಷಯ ಕೇಳಿದ್ದರಂತೆ.

ಆರ್‌ಸಿಬಿಗೆ ಎಬಿಡಿ ಬಂದ ನಂತರ ಕ್ರಿಕೆಟ್ ಆಟವು ಇವರನ್ನು ಸಮೀಪಕ್ಕೆ ತಂದರೆ, ಉದ್ಯಾನನಗರಿ ಬೆಂಗಳೂರು ಇವರ ಸ್ನೇಹಕ್ಕೆ ನೀರೆರೆದು ಹಸಿರಾಗಿಸಿತು. ಅದರ ಫಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯ ವರ್ಚಸ್ಸು ಹೆಚ್ಚಾಗಲು ಕಾರಣವಾಯಿತು. ಸೋಮವಾರ ರಾತ್ರಿಯ ಪಂದ್ಯದಲ್ಲಿ ಈ ಜೋಡಿಯ ಆಟವೇ ಆರ್‌ಸಿಬಿ ಜಯಕ್ಕೂ ಕಾರಣವಾಯಿತು.

‘ಮಿಸ್ಟರ್ 360 ಡಿಗ್ರಿ’ ಎಂದೇ ಖ್ಯಾತರಾಗಿರುವ ಎಬಿಡಿ ಮತ್ತು ‘ಕಿಂಗ್ ಕೊಹ್ಲಿ’ ವಿರಾಟ್ ಇಲ್ಲೊಂದು ಇತಿಹಾಸ ಬರೆದರು. ಇಲ್ಲಿ ಅವರು ಆಡಿದ 100 ರನ್‌ಗಳ ಜೊತೆಯಾಟವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯ ವಿನೂತನ ದಾಖಲೆಯೂ ಆಯಿತು. ಅವರಿಬ್ಬರಿಂದ 100ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ಮೂಡಿಬಂದಿದ್ದು ಇದು ಹತ್ತನೇ ಬಾರಿ. ಇದರಲ್ಲಿ ಎರಡು ಸಲ ಇನ್ನೂರಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆಯೂ ಇದೆ. ಬ್ಯಾಟಿಂಗ್, ದಾಖಲೆ, ಆಟದ ವಿಷಯ ಒಂದೆಡೆ. ಆದರೆ ಅವರಿಬ್ಬರ ಸ್ನೇಹ ಮಾತ್ರ ಇದೆಲ್ಲವನ್ನೂ ಮೀರಿದ ದಂತಕಥೆ.

‘ಕ್ರಿಕೆಟ್‌ ಆಟ ಹೌದು. ಆದರೆ ಅದೆಲ್ಲವನ್ನೂ ಮೀರಿದ್ದು ಹೃದಯಗಳನ್ನು ಬೆಸೆಯುವ ಗೆಳೆತನದ ಗಟ್ಟಿ ಸೇತುವೆ ಅದು’ ಎಂದು ವಿರಾಟ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.