ADVERTISEMENT

IPL | ಬೂಮ್ರಾ ಯಾರ್ಕರ್‌ಗೆ ಮಣಿದ ಗುಜರಾತ್: ಕ್ವಾಲಿಫೈಯರ್‌ಗೆ ಮುಂಬೈ ಇಂಡಿಯನ್ಸ್

ಪಿಟಿಐ
Published 30 ಮೇ 2025, 20:59 IST
Last Updated 30 ಮೇ 2025, 20:59 IST
ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಮತ್ತು ಜಾನಿ ಬೆಸ್ಟೊ
ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಮತ್ತು ಜಾನಿ ಬೆಸ್ಟೊ   

ಮುಲ್ಲನಪುರ, ಚಂಡೀಗಢ: ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಅವರ  ದಿಟ್ಟ ಹೋರಾಟವನ್ನು ಮೀರಿ ನಿಂತ ಮುಂಬೈ ಇಂಡಿಯನ್ಸ್ ತಂಡವು ಎಲಿಮಿನೇಟರ್‌ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಅದರೊಂದಿಗೆ ಎರಡನೇ ಕ್ವಾಲಿಫೈಯರ್‌ಗೆ ಪ್ರವೇಶಿಸಿತು. 

ಮಹಾರಾಜ ಯಾದವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ 229 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಗುಜರಾತ್ ತಂಡಕ್ಕೆ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 208 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಮುಂಬೈ ತಂಡವು 20 ರನ್‌ಗಳಿಂದ ಗೆದ್ದಿತು. ಭಾನುವಾರ ನಡೆಯುವ ಎರಡನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಅದರಲ್ಲಿ ಜಯಿಸಿದ ತಂಡವು ಜೂನ್ 3ರಂದು ನಡೆಯುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು  ವಿರುದ್ಧ ಆಡಲಿದೆ

ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಮಾಡಿರುವ ಸಾಯಿ ಸುದರ್ಶನ್ (80; 49ಎ, 4X10, 6X1) ಮತ್ತು ವಾಷಿಂಗ್ಟನ್ ಸುಂದರ್ (48; 24ಎ, 4X5, 6X3) ಮೂರನೇ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿದರು. ಇದರಿಂದಾಗಿ ಗುಜರಾತ್ ತಂಡಕ್ಕೆ ಗೆಲುವಿನ ಆಸೆ ಚಿಗುರಿತ್ತು. ಇಬ್ಬರೂ ಬ್ಯಾಟರ್‌ಗಳು ಬೌಲರ್‌ಗಳ ಎಸೆತಗಳನ್ನು ಮನಬಂದಂತೆ ದಂಡಿಸಿದರು. ಟ್ರೆಂಟ್‌ ಬೌಲ್ಟ್‌ ಅವಂತಹ ನುರಿತ ವೇಗಿಯ ಎದುರು  ಲೀಲಾಜಾಲವಾಗಿ ಆಡಿದರು. ಆದರೆ 14ನೇ ಓವರ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಹಾಕಿದ ಯಾರ್ಕರ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ವಾಷಿಂಗ್ಟನ್ ಸುಂದರ್ ಮುಗ್ಗರಿಸಿ ಬೀಳುವುದರ ಜೊತೆಗೆ ಕ್ಲೀನ್‌ಬೌಲ್ಡ್ ಕೂಡ ಆದರು. ಇದು ಇನಿಂಗ್ಸ್‌ಗೆ ತಿರುವು ನೀಡಿತು. 

ADVERTISEMENT

ಆದರೆ ಇನ್ನೊಂದು ಬದಿಯಲ್ಲಿ ಸಾಯಿ ಸುದರ್ಶನ್ ಹೋರಾಟ ಜಾರಿಯಲ್ಲಿತ್ತು. 16ನೇ ಓವರ್‌ನಲ್ಲಿ ರಿಚರ್ಡ್ ಗ್ಲೀಸನ್ ಎಸೆತದಲ್ಲಿ ಸಾಯಿ ಸುದರ್ಶನ್ ಕೂಡ ಕ್ಲೀನ್‌ಬೌಲ್ಡ್ ಆದರು. ನಂತರ ಬಂದ ಬ್ಯಾಟರ್‌ಗಳೂ ಹೋರಾಟ ಮಾಡಿದರು. ಆದರೆ ಮುಂಬೈ ಬೌಲರ್‌ಗಳು ಬಿಗಿಹಿಡಿತ ಸಾಧಿಸಿದರು. 

ರೋಹಿತ್, ಜಾನಿ ಅಬ್ಬರ: 

ಟಾಸ್ ಗೆದ್ದ ಮುಂಬೈ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕೆ ತಕ್ಕಂತೆ ಆರಂಭಿಕ ಜೋಡಿ ರೋಹಿತ್ (81; 50ಎ) ಮತ್ತು ಜಾನಿ ಬೆಸ್ಟೊ (47; 22ಎ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 84 ರನ್ ಸೇರಿಸಿದರು. ಈ ಅಡಿಪಾಯದ ಮೇಲೆ ಮುಂಬೈ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 228 ರನ್ ಗಳಿಸಿತು. 

ಪ್ರಸಿದ್ಧಕೃಷ್ಣ ಹಾಕಿದ ಎರಡನೇ ಓವರ್‌ನಲ್ಲಿ  ಫೀಲ್ಡರ್ ಗೆರಾಲ್ಡ್ ಕೋಟ್ಜಿಯೆ ಮತ್ತು ಸಿರಾಜ್ ಹಾಕಿದ 3ನೇ ಓವರ್‌ನಲ್ಲಿ ಕುಸಾಲ ಮೆಂಡಿಸ್ ಅವರು ರೋಹಿತ್‌ಗೆ ಜೀವದಾನ ನೀಡಿದರು. ಇದನ್ನು ಸಮರ್ಥವಾಗಿ ಬಳಸಿಕೊಂಡ ರೋಹಿತ್ ಅಬ್ಬರಿಸಿದರು. ಈ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯವಾಡಿದ ಇಂಗ್ಲೆಂಡ್‌ ಆಟಗಾರ ಜಾನಿ ಅವರು ರೋಹಿತ್ ಅವರೊಂದಿಗೆ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಕೇವಲ 7 ಓವರ್‌ಗಳಲ್ಲಿ 84 ರನ್‌ ಗಳಿಸಿದರು. 

ರೋಹಿತ್ 28 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಅವರು ಶತಕ ಗಳಿಸುವ ಭರವಸೆ ಕೂಡ ಮೂಡಿಸಿದ್ದರು. ನಾಲ್ಕು ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಸಿಡಿಸಿದರು. ಜಾನಿ ಕೂಡ 4 ಬೌಂಡರಿ ಮತ್ತು 3 ಸಿಕ್ಸರ್ ಹೊಡೆದರು. ಎಂಟನೇ ಓವರ್‌ನಲ್ಲಿ ಸ್ಪಿನ್ನರ್ ಸಾಯಿಕಿಶೋರ್ ಅವರು ಜಾನಿ ವಿಕೆಟ್ ಗಳಿಸುವ ಮೂಲಕ ಜೊತೆಯಾಟ ಮುರಿದರು. 

ಆದರೆ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ 33 ರನ್‌ ಸೂರೆ ಮಾಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ರೋಹಿತ್ ಮತ್ತು ಸೂರ್ಯಕುಮಾರ್ ಅವರು 59 ರನ್ ಸೇರಿಸಿದರು.  ಆದರೆ ಕ್ರೀಸ್‌ನಲ್ಲಿದ್ದ ನಾಯಕ ಹಾರ್ದಿಕ್‌ 9 ಎಸೆತಗಳಲ್ಲಿ22 ರನ್‌ ಹೊಡೆದರು.  

ಸಂಕ್ಷಿಪ್ತ ಸ್ಕೋರು:

ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 228 (ರೋಹಿತ್ ಶರ್ಮಾ 81, ಜಾನಿ ಬೆಸ್ಟೊ 47, ಸೂರ್ಯಕುಮಾರ್ ಯಾದವ್ 33, ತಿಲಕ್ ವರ್ಮಾ 25, ಹಾರ್ದಿಕ್ ಪಾಂಡ್ಯ ಔಟಾಗದೇ 22, ಪ್ರಸಿದ್ಧಕೃಷ್ಣ 53ಕ್ಕೆ2, ಸಾಯಿಕಿಶೋರ್ 42ಕ್ಕೆ2, ಸಿರಾಜ್ 37ಕ್ಕೆ1)

ಗುಜರಾತ್ ಟೈಟನ್ಸ್: 20 ಓವರ್‌ಗಳಲ್ಲಿ 6ಕ್ಕೆ208 (ಸಾಯಿ ಸುದರ್ಶನ್ 80, ಕುಶಾಲ ಮೆಂಡಿಸ್ 20, ವಾಷಿಂಗ್ಟನ್ ಸುಂದರ್ 48, ಶೆರ್ಫೈನ್ ರುದರ್‌ಫೋರ್ಡ್ 24, ಟ್ರೆಂಟ್ ಬೌಲ್ಟ್ 56ಕ್ಕೆ2) ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 20 ರನ್‌ಗಳ ಜಯ. ಪಂದ್ಯ ಶ್ರೇಷ್ಠ: ರೋಹಿತ್ ಶರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.