ADVERTISEMENT

ಬ್ಯಾಟಿಂಗ್–ಬೌಲಿಂಗ್–ಫೀಲ್ಡಿಂಗ್: ನಾನಿದ್ದೀನಿ ಎನ್ನುವ ಪಾಂಡ್ಯ ಭಾರತ ತಂಡದ ಶಕ್ತಿ

Dinesha R
Published 27 ಫೆಬ್ರುವರಿ 2026, 7:04 IST
Last Updated 27 ಫೆಬ್ರುವರಿ 2026, 7:04 IST
<div class="paragraphs"><p>ಭಾರತ ತಂಡದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್&nbsp;</p></div>

ಭಾರತ ತಂಡದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ 

   

ಭಾರತ ಕ್ರಿಕೆಟ್ ತಂಡವು ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಆದರೆ, ಸೂಪರ್–8ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ ಸೆಮಿಫೈನಲ್ ತಲುಪುವುದು ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಈಗ ಆ ಆತಂಕ ದೂರವಾಗಿದೆ. ಸೂಪರ್–8ರಲ್ಲಿ ಬಾಕಿ ಉಳಿದಿರುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಗೆದ್ದರೆ ಸಾಕು, ಭಾರತ ತಂಡ ಸುಲಭವಾಗಿ ಸೆಮಿಫೈನಲ್ ಪ್ರವೇಶ ಪಡೆಯಲಿದೆ. ಇನ್ನೂ ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡುತ್ತಿರುವ ಆಟಗಾರ ಅಂದರೆ, ಅದು ಟೀಂ ಇಂಡಿಯಾದ ತಾರಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ.

ಟಿ20 ವಿಶ್ವಕಪ್ 2026ರಲ್ಲಿ ಪಾಂಡ್ಯ ಪ್ರದರ್ಶನ

ADVERTISEMENT

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಅಮೋಘ ಲಯದಲ್ಲಿರುವ ಹಾರ್ದಿಕ್ ಪಾಂಡ್ಯ, ಯುವ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಅವರು, ಈ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ಆದರೆ, ಬೌಲಿಂಗ್‌ನಲ್ಲಿ 4 ಓವರ್‌ ಬೌಲ್ ಮಾಡಿ ಗಮನಸೆಳೆದರು.

ನಮೀಬಿಯಾ ವಿರುದ್ಧ ಪಂದ್ಯಶ್ರೇಷ್ಠ

ಕ್ರಿಕೆಟ್ ಶಿಶು ನಮೀಬಿಯಾ ತಂಡದ ವಿರುದ್ಧ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಹಾರ್ದಿಕ್ ಕೇವಲ 28 ಎಸೆತಗಳಲ್ಲಿ 52 ರನ್ ಬಾರಿಸಿದರು. ಮಾತ್ರವಲ್ಲ, ಬೌಲಿಂಗ್‌ನಲ್ಲೂ 2ವಿಕೆಟ್ ತೆಗೆದು ಮಿಂಚಿದರು. ಅವರ ಈ ಪರಿಣಾಮಕಾರಿ ಪ್ರದರ್ಶನದ ನೆರವಿನಿಂದ ಭಾರತ ತಂಡ 93 ರನ್‌ಗಳ ಸುಲಭ ಗೆಲುವು ದಾಖಲಿಸಿತು.

ಪಾಕಿಸ್ತಾನ ವಿರುದ್ಧ ಮಿಂಚಿನ ಬೌಲಿಂಗ್

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಸದಾ ಕಾಲವೂ ಅಬ್ಬರದ ಬ್ಯಾಟಿಂಗ್ ನಡೆಸುವ ಪಾಂಡ್ಯ, ಈ ಬಾರಿ ರನ್ ಗಳಿಸಲು ವಿಫಲರಾದರು. ಆದರೆ, ಬೌಲಿಂಗ್‌ನಲ್ಲಿ ಮಿಂಚಿದ ಅವರು, 3 ಓವರ್‌ ಬೌಲಿಂಗ್ ಮಾಡಿ ಒಂದು ಮೆಡನ್ ಓವರ್ ಸಹಿತ 16 ರನ್‌ಗೆ 2 ಪ್ರಮುಖ ವಿಕೆಟ್ ಕಬಳಿಸಿ ಭಾರತದ ಗೆಲುವಿಗೆ ನೆರವಾದರು.

ನೆದರ್‌ಲ್ಯಾಂಡ್ ವಿರುದ್ಧವೂ ಆಲ್‌ರೌಂಡ್ ಆಟ

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಮಿಂಚಿದ ಹಾರ್ದಿಕ್ ಪಾಂಡ್ಯ, ಬ್ಯಾಟಿಂಗ್‌ನಲ್ಲಿ ಸ್ಫೋಟಕ 30 ರನ್ ಹಾಗೂ ಬೌಲಿಂಗ್‌ನಲ್ಲಿ 1 ವಿಕೆಟ್ ತೆಗೆದು ಮಿಂಚಿದರು. ಆ ಮೂಲಕ ಭಾರತ ತಂಡವು 17 ರನ್‌ಗಳ ಗೆಲುವು ಸಾಧಿಸಲು ನೆರವಾದರು.

ನಿರ್ಣಾಯಕ ಪಂದ್ಯದಲ್ಲಿ ಮಿಂಚಿದ ಹಾರ್ದಿಕ್

ಭಾರತ ತಂಡವು ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಜಿಂಬಾಂಬ್ವೆ ತಂಡದ ವಿರುದ್ಧ ಗೆಲುವು ಅನಿವಾರ್ಯವಾಗಿತ್ತು. ಈ ನಿರ್ಣಾಯಕ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ 50 ರನ್ ಸಿಡಿಸಿದ ಹಾರ್ದಿಕ್ ಪಾಂಡ್ಯ, ಬೌಲಿಂಗ್‌ನಲ್ಲೂ ಪ್ರಮುಖ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಈ ಪ್ರದರ್ಶನದಿಂದಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಪಡೆದುಕೊಂಡರು.

ಯುವ ಆಟಗಾರರಿಗೆ ಸ್ಫೂರ್ತಿ ಹಾರ್ದಿಕ್ ಪಾಂಡ್ಯ:

ಮೈದಾನದಲ್ಲಿ ಸದಾ ಚುರುಕಾಗಿರುವ ಹಾರ್ದಿಕ್ ಪಾಂಡ್ಯ ಅವರು ಯುವ ಆಟಗಾರರಿಗೆ ಸ್ಪೂರ್ತಿ ತುಂಬುತ್ತಿರುತ್ತಾರೆ. ಯಾವುದೇ ಸಂದರ್ಭದಲ್ಲಿ, ಯಾವುದೇ ಆಟಗಾರ ಕುಗ್ಗಿದಾಗ ಅವರ ಬಳಿ ಬಂದು ಆತ್ಮವಿಶ್ವಾಸ ತುಂಬುವುದರಲ್ಲಿ ಅವರು ಮುಂದಿರುತ್ತಾರೆ. ಮಾತ್ರವಲ್ಲ, ಅನೇಕ ಸಂದರ್ಭದಲ್ಲಿ ಸಹ ಆಟಗಾರರಿಗೆ ಹಾಗೂ ಬೇರೆ ತಂಡದ ಅಟಗಾರರಿಗೆ ಮಾರ್ಗದರ್ಶನ ನೀಡುವುದರಲ್ಲೂ ಅವರು ಮುಂದಿದ್ದಾರೆ.

ಈ ಕಾಲಘಟ್ಟದ ಉತ್ತಮ ಆಲ್‌ರೌಂಡರ್ ಹಾರ್ದಿಕ್

ಹಾರ್ದಿಕ್ ಪಾಂಡ್ಯ ಅವರನ್ನು ಆರಂಭದಲ್ಲಿ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ಹೋಲಿಸಲಾಗಿತ್ತು. ಅಂದಿನ ಕಾಲಘಟ್ಟದಲ್ಲಿ ಕಪಿಲ್ ದೇವ್ ಅವರು ಅತ್ಯುತ್ತಮ ಆಲ್‌ರೌಂಡರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಭಾರತ ತಂಡದಲ್ಲಿ ಅವಕಾಶ ಪಡೆಯಲು ಅನೇಕ ಯುವ ಆಟಗಾರರು ಪೈಪೋಟಿ ನಡೆಸುವ ಕಾಲಘಟ್ಟದಲ್ಲೂ ಹಾರ್ದಿಕ್ ಪಾಂಡ್ಯ, ಅದ್ಭುತ ಆಲ್‌ರೌಂಡರ್ ಆಗಿ ತಂಡದ ಖಾಯಂ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲ, ತಂಡಕ್ಕೆ ತಾವೇಕೆ ಅನಿವಾರ್ಯ ಎಂಬುದನ್ನು ಅನೇಕ ಸಂದರ್ಭದಲ್ಲಿ ತಿಳಿಸಿದ್ದಾರೆ.

ಅವಕಾಶಗಳ ಕೊರತೆ

ಭಾರತ ತಂಡದ ಮೂರು ಮಾದರಿಯಲ್ಲಿ ಖಾಯಂ ಆಟಗಾರನಾಗುವ ಎಲ್ಲಾ ಸಾಮರ್ಥ್ಯ ಇರುವುದರ ಹೊರತಾಗಿಯೂ ಪಾಂಡ್ಯ ಅವರು, ಫಿಟ್‌ನೆಸ್ ಸಮಸ್ಯೆಯಿಂದಾಗಿ ಆಗಾಗ ತಂಡದಿಂದ ದೂರ ಉಳಿಯುತ್ತಾರೆ. ಪ್ರಮುಖ ಟೂರ್ನಿಗಳಿಗೆ ಅವರ ಲಭ್ಯತೆ ಅಗತ್ಯವಾಗಿರುವುದರಿಂದ ಆಯ್ಕೆ ಸಮಿತಿ ಕೂಡ ಸೀಮಿತ ಓವರ್‌ಗಳ ಪ್ರಮುಖ ಟೂರ್ನಮೆಂಟ್‌ಗಳಿಗೆ ಹೊರತುಪಡಿಸಿ, ಸಾಮಾನ್ಯ ಟೂರ್ನಿಗಳಿಂದ ಅವರಿಗೆ ವಿಶ್ರಾಂತಿ ನೀಡುತ್ತಾರೆ. ಒಂದುವೇಳೆ, ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನ ಎಲ್ಲಾ ಸರಣಿಗಳನ್ನು ಆಡಿದ್ದರೆ, ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುತ್ತಿದ್ದರು.

ಐಪಿಎಲ್‌ನ ಬಹುಬೇಡಿಕೆಯ ಆಟಗಾರ

2022ರವರೆಗೆ ಮುಂಬೈ ಇಂಡಿಯನ್ಸ್ ತಂಡದ ಖಾಯಂ ಆಟಗಾರನಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಫ್ರಾಂಚೈಸಿ 2022ರಲ್ಲಿ ಬಿಡುಗಡೆ ಮಾಡಿತ್ತು. ಅದೇ ವರ್ಷ ಗುಜರಾತ್ ಜೈಂಟ್ಸ್ ಫ್ರಾಂಚೈಸಿ ಸೇರಿಕೊಂಡ ಪಾಂಡ್ಯ, ಗುಜರಾತ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದರು. ಆ ಮೂಲಕ ಆಟಗಾರನಾಗಿ ಮಾತ್ರವಲ್ಲ, ನಾಯಕನಾಗಿಯೂ ಯಶಸ್ಸು ಸಾಧಿಸಬಲ್ಲೆ ಎಂಬುದನ್ನು ಸಾಬೀತುಪಡಿಸಿದರು. ಮಾತ್ರವಲ್ಲ, 2023ರಲ್ಲೂ ಗುಜರಾತ್ ತಂಡವನ್ನು ಫೈನಲ್‌ಗೆ ತೆಗೆದುಕೊಂಡು ಹೋಗಿದ್ದರು.

ಮರಳಿ ಗೂಡಿಗೆ

ಮುಂಬೈ ತಂಡದ ಜೊತೆ ಹಲವು ವರ್ಷಗಳ ಕಾಲ ಆಡಿದ್ದ ಪಾಂಡ್ಯ ಅವರನ್ನು ಮುಂಬೈ ಫ್ರಾಂಚೈಸಿ 2024ರ ವೇಳೆಗೆ ಮತ್ತೆ ತಂಡಕ್ಕೆ ಸೇರಿಸಿಕೊಂಡಿತು. ಮಾತ್ರವಲ್ಲ, ರೋಹಿತ್ ಶರ್ಮಾರಂತಹ ಆಟಗಾರ ಇದ್ದಾಗ್ಯೂ ಪಾಂಡ್ಯ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿದೆ.

ಸೀಮಿತ ಓವರ್‌ಗಳಲ್ಲಿ ಭಾರತದ ಪ್ರಮುಖ ಆಟಗಾರ

ಭಾರತದಲ್ಲೀಗ ಮೂರು ಮಾದರಿಯ ಕ್ರಿಕೆಟ್ ಆಡುವ ಆಟಗಾರರ ಸಂಖ್ಯೆ ತುಂಬಾ ಕಡಿಮೆ ಇದೆ. ಆದರೆ, ಹಾರ್ದಿಕ್ ಪಾಂಡ್ಯ ಅವರಿಗೆ ಆ ಅರ್ಹತೆ ಇದ್ದರೂ ಕೂಡ, ಫಿಟ್‌ನೆಸ್ ಸಮಸ್ಯೆಯಿಂದಾಗಿ ತಂಡದ ಅಗತ್ಯತೆಗೆ ಅನುಗುಣವಾಗಿ ಅವರನ್ನು ಏಕದಿನ ಮತ್ತು ಟಿ20 ತಂಡದ ಖಾಯಂ ಆಟಗಾರರಾಗಿದ್ದಾರೆ. ಭಾರತ ತಂಡದ ಪರ ಇದುವರೆಗೂ 94 ಏಕದಿನ ಪಂದ್ಯಗಳನ್ನು ಆಡಿರುವ ಅವರು, 33ರ ಸರಾಸರಿಯಲ್ಲಿ 1,904 ರನ್ ಕಲೆಹಾಕಿದ್ದಾರೆ. ಮಾತ್ರವಲ್ಲ, ಬೌಲಿಂಗ್‌ನಲ್ಲೂ 91 ವಿಕೆಟ್ ಪಡೆದು ಮಿಂಚಿದ್ದಾರೆ.

ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ತೋರಿರುವ ಹಾರ್ದಿಕ್ ಅವರು ಆಡಿರುವ 135 ಪಂದ್ಯಗಳಿಂದ 2,226 ರನ್ ಹಾಗೂ 110 ವಿಕೆಟ್ ಪಡೆದು ಮಿಂಚಿದ್ದಾರೆ. ಮಾತ್ರವಲ್ಲ, ಟೆಸ್ಟ್ ಕ್ರಿಕೆಟ್‌ನಲ್ಲೂ 18 ಇನಿಂಗ್ಸ್ ಆಡಿರುವ ಅವರು 31ರ ಸರಾಸರಿಯಲ್ಲಿ 532 ರನ್ ಕಲೆಹಾಕಿದ್ದಾರೆ ಹಾಗೂ ಬೌಲಿಂಗ್‌ನಲ್ಲಿ 17 ವಿಕೆಟ್ ಪಡೆದುಕೊಂಡಿದ್ದಾರೆ.

ಸದ್ಯ, ಭಾರತ ತಂಡದ ಪರವಾಗಿ ಅಮೋಘ ಪ್ರದರ್ಶನ ತೋರುತ್ತಿರುವ ಹಾರ್ದಿಕ್ ಪಾಂಡ್ಯ ಅವರು, ಮುಂದಿನ ಮೂರರಿಂದ ನಾಲ್ಕು ವರ್ಷಗಳ ಕಾಲ ಭಾರತ ತಂಡದ ಪ್ರಮುಖ ಆಟಗಾರನಾಗಿ ಮಿಂಚುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಸೂರ್ಯಕುಮಾರ್ ಯಾದವ್ ಬಳಿಕ ಭಾರತ ಟಿ20 ತಂಡವನ್ನು ಮುನ್ನಡೆಸುವ ಅವಕಾಶ ಒಲಿದು ಬಂದರು ಆಶ್ಚರ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.