ಹರ್ಮನ್‌ಪ್ರೀತ್ ಕೌರ್
ಚೆಸ್ಟರ್ ಲಿ ಸ್ಟ್ರೀಟ್: ಇಂಗ್ಲೆಂಡ್ ತಂಡವನ್ನು ಅದರ ತವರಿನಲ್ಲಿಯೇ ಎರಡು ಸರಣಿಗಳಲ್ಲಿ ಸೋಲಿಸಿರುವ ಭಾರತ ವನಿತೆಯರ ತಂಡವು ಅಪಾರ ಆತ್ಮವಿಶ್ವಾಸದಲ್ಲಿದೆ. ಅದರಿಂದಾಗಿ ಮುಂಬರಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಸಾಧನೆ ಮಾಡುವತ್ತ ತಂಡವು ಚಿತ್ತ ನೆಟ್ಟಿದೆ.
ಇಂಗ್ಲೆಂಡ್ ಮಹಿಳಾ ತಂಡದ ಎದುರು ಮಂಗಳವಾರ ರಾತ್ರಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 13 ರನ್‌ಗಳಿಂದ ಜಯಿಸಿದ ಹರ್ಮನ್‌ಪ್ರೀತ್ ಕೌರ್ ಬಳಗವು 2–1ರಿಂದ ಸರಣಿ ಗೆಲುವು ಸಾಧಿಸಿತ್ತು. ಇದಕ್ಕಿಂತ ಮುಂದೆ ಟಿ20 ಸರಣಿಯಲ್ಲಿ ಭಾರತವು 3–2ರಿಂದ ಜಯಿಸಿತ್ತು. ಇದೇ ಸೆಪ್ಟೆಂಬರ್ 30ರಿಂದ ನವೆಂಬರ್ 2ರವರೆಗೆ ಶ್ರೀಲಂಕಾ ಮತ್ತು ಭಾರತದ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ.
ಈ ಕುರಿತು ಮಂಗಳವಾರ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಮನ್‌ಪ್ರೀತ್ ಕೌರ್, ‘ಪ್ರತಿ ಪಂದ್ಯ ಮತ್ತು ಸಂದರ್ಭಗಳು ವಿಭಿನ್ನವಾಗಿಯೇ ಇರುತ್ತವೆ. ಪಿಚ್, ವಾತಾವರಣ ಮತ್ತು ಪರಿಸ್ಥಿತಿ ಬೇರೆ ಬೇರೆಯೇ ಆಗಿರುತ್ತವೆ. ತವರಿನಲ್ಲಿ ಆಡುವ ವಾತಾವರಣವೂ ವಿಭಿನ್ನವಾಗಿರುತ್ತವೆ’ ಎಂದರು.
ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಅವರು ಶತಕ ಗಳಿಸಿ ತಂಡದ ಗೆಲುವಿನ ರೂವಾರಿಯಾಗಿದ್ದರು.
‘ಪ್ರತಿ ಪಂದ್ಯವನ್ನೂ ಮೊದಲ ಎಸೆತದಿಂದಲೇ ಆರಂಭಿಸಬೇಕು. ಈ ಸರಣಿಗಳಲ್ಲಿ ಗೆದ್ದಿರುವುದು ನಮ್ಮ ಆತ್ಮವಿಶ್ವಾಸದ ಮಟ್ಟ ಹೆಚ್ಚಲು ಕಾರಣವಾಗಿರುವುದು ನಿಜ. ಆದರೆ ಒಂದೊಮ್ಮೆ ನಾವು ಮುಂದೆ ಯಾವುದೇ ಪಂದ್ಯ ಆಡುವಾಗಲೂ ಮೊದಲ ಎಸೆತದಿಂದಲೇ ಶುರು ಮಾಡಬೇಕು. ಅದೆಲ್ಲವೂ ಹೊಸ ಆರಂಭವಾಗಿರುತ್ತದೆ’ ಎಂದು ಹೇಳಿದರು.
‘ತಂಡದ ಎಲ್ಲ ಆಟಗಾರ್ತಿಯರು ಉತ್ತಮ ಸಾಧನೆ ಮಾಡಿದ್ದಾರೆ. ಎಲ್ಲರೂ ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದು ನನಗೆ ಸಂತೋಷವಾಗಿದೆ. ಬಹಳ ಸಕಾರಾತ್ಮಕ ಧೋರಣೆಯೊಂದಿಗೆ ಆಡುತ್ತಿದ್ದಾರೆ. ಕಠಿಣ ಪರಿಶ್ರಮ ಹಾಗೂ ಫಿಟ್ ಆಗಿದ್ದಾರೆ’ ಎಂದು ಹೇಳಿದರು.
ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 5ಕ್ಕೆ318 (ಹರ್ಮನ್‌ಪ್ರೀತ್ ಕೌರ್ 102, ಜೆಮಿಮಾ ರಾಡ್ರಿಗಸ್ 50)
ಇಂಗ್ಲೆಂಡ್: 49.5 ಓವರ್‌ಗಳಲ್ಲಿ 305 (ಎಮಾ ಲ್ಯಾಂಬ್ 68, ನ್ಯಾಟ್ ಶಿವರ್ ಬ್ರಂಟ್ 98, ಸೋಫಿಯಾ ಡಂಕ್ಲಿ 34, ಅಲೈಸ್ ಡೇವಿಡ್ಸನ್ ರಿಚರ್ಡ್ಸ್ 44, ಶಾರ್ಲೆಟ್ ಡೀನ್ 21, ಕ್ರಾಂತಿ ಗೌಡ್ 52ಕ್ಕೆ6, ಶ್ರೀಚರಣಿ 68ಕ್ಕೆ2)
ಫಲಿತಾಂಶ: ಭಾರತ ತಂಡಕ್ಕೆ 13 ರನ್‌ಗಳ ಜಯ, 2–1ರಿಂದ ಸರಣಿ ಗೆಲುವು. ಪಂದ್ಯದ ಆಟಗಾರ್ತಿ: ಹರ್ಮನ್‌ಪ್ರೀತ್ ಕೌರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.