ರೋಹಿತ್ ಶರ್ಮಾ, ಗೌತಮ್ ಗಂಭೀರ್
(ಪಿಟಿಐ ಚಿತ್ರ)
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದು ಟೀಮ್ ಇಂಡಿಯಾ ಅಜೇಯವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಆದರೆ ಕೋಚ್ ಗೌತಮ್ ಗಂಭೀರ್ ಮಾತ್ರ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ಸಂತೃಪ್ತಿಯನ್ನು ಹೊಂದಿಲ್ಲ. 'ಇಲ್ಲಿಯವರೆಗೆ ನಾವು ನಮ್ಮ ಪರಿಪೂರ್ಣವಾದ ಆಟವನ್ನು ಆಡಿಲ್ಲ. ಬಹುಶಃ ಭಾನುವಾರ (ಮಾರ್ಚ್ 9) ನಡೆಯಲಿರುವ ಫೈನಲ್‌ನಲ್ಲಿ ಟೀಮ್ ಇಂಡಿಯಾ ತನ್ನ ಶ್ರೇಷ್ಠ ಪ್ರದರ್ಶನವನ್ನು ನೀಡಲಿದೆ' ಎಂದು ಹೇಳಿದ್ದಾರೆ.
'ನೋಡಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೀವು ಸದಾ ಉತ್ತಮ ಪ್ರದರ್ಶನ ನೀಡಲು ಬಯಸುತ್ತೀರಿ. ಎಲ್ಲ ಬಾಕ್ಸ್‌ಗಳನ್ನು ಟಿಕ್ ಮಾಡಿದ್ದೇವೆ ಎಂದು ಹೇಳಲು ಇಷ್ಟಪಡುವುದಿಲ್ಲ. ನಾವೀಗಲೂ ಪರಿಪೂರ್ಣವಾದ ಆಟವನ್ನು ಆಡಿಲ್ಲ. ನಮ್ಮ ಆಟದಿಂದ ಸಂಪೂರ್ಣ ಸಂತೃಪ್ತಿಯನ್ನು ಹೊಂದಿಲ್ಲ' ಎಂದು ಹೇಳಿದ್ದಾರೆ.
ಮಂಗಳವಾರ ದುಬೈನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ವಿಕೆಟ್ ಅಂತರದ ಜಯ ಗಳಿಸಿದ ಭಾರತ ಫೈನಲ್‌ಗೆ ಪ್ರವೇಶಿಸಿತು. 84 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪುರಸ್ಕೃತರಾಗಿದ್ದರು.
'ಟೂರ್ನಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿದೆ. ಅಂದು ಪರಿಪೂರ್ಣ ಆಟವನ್ನು ಆಡುವ ನಿರೀಕ್ಷೆಯಲ್ಲಿದ್ದೇವೆ. ನಮ್ಮ ನಿರ್ವಹಣೆಯಲ್ಲಿ ಸುಧಾರಣೆಯನ್ನು ಬಯಸುತ್ತೇವೆ. ಮೈದಾನದಲ್ಲಿ ನಿರ್ದಯ ಹಾಗೂ ಮೈದಾನದ ಹೊರಗಡೆ ವಿನಮ್ರರಾಗಿರಲು ಬಯಸುತ್ತೇವೆ' ಎಂದು ಅವರು ಹೇಳಿದ್ದಾರೆ.
ಅಕ್ಷರ್ ಪಟೇಲ್ ಅವರಿಗೆ ಐದನೇ ಕ್ರಮಾಂಕದಲ್ಲಿ ಬಡ್ತಿ ನೀಡಿರುವುದು ಹಾಗೂ ಕೆ.ಎಲ್. ರಾಹುಲ್ ಅವರನ್ನು 6ನೇ ಕ್ರಮಾಂಕಕ್ಕೆ ಇಳಿಸಿರುವ ನಿರ್ಧಾರವನ್ನು ಗಂಭೀರ್ ಸಮರ್ಥಿಸಿಕೊಂಡರು.
'ಹೊರಗಿನಿಂದ ನೋಡುವವರಿಗೆ ತರ್ಕಹೀನವಾಗಿ ಕಾಣಿಸಬಹುದು. ಆದರೆ ಪ್ರತಿಯೊಬ್ಬ ಆಟಗಾರನೂ ತಮ್ಮ 'ಆರಾಮ ವಲಯ'ದಿಂದ ಹೊರಬಂದು ಆಡಬೇಕು ಎಂದು ನಾನು ಭಾವಿಸುತ್ತೇನೆ. ಆಗ ಮಾತ್ರ ಉತ್ತಮ ಪ್ರದರ್ಶನ ನೀಡಲು ಸಾಧ್ಯ. ಫಲಿತಾಂಶವೇ ನಿಮ್ಮ ಮುಂದಿದೆ. ಭಾರತೀಯ ಕ್ರಿಕೆಟ್ ಪಾಲಿಗೆ ಇದು ಮುಖ್ಯವೆನಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಭವಿಷ್ಯದ ಯೋಜನೆ ಕುರಿತು ಕೇಳಿದಾಗ, 'ಸದ್ಯ ಏನಿದ್ದರೂ ಮಾರ್ಚ್ 9ರತ್ತ ಗಮನ ಕೇಂದ್ರಿಕರಿಸಿದ್ದೇವೆ. ಅದಾದ ಬಳಿಕ ಭವಿಷ್ಯದ ಕುರಿತು ಚಿಂತಿಸಲಾಗುವುದು. ನಿಸ್ಸಂಶಯವಾಗಿಯೂ ಭವಿಷ್ಯದ ಕುರಿತು ಯೋಜನೆಗಳಿವೆ. ಆದರೆ ಈಗ ಫೈನಲ್ ಮೇಲೆ ಗಮನ ಹರಿಸಿದ್ದೇವೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.