ADVERTISEMENT

IPL: ಮುಂದಿನ ವರ್ಷ ಆರ್‌ಸಿಬಿ ತಂಡಕ್ಕೆ ಮರಳುತ್ತೇನೆ: ಎಬಿ ಡಿವಿಲಿಯರ್ಸ್

ಪಿಟಿಐ
Published 25 ಮೇ 2022, 10:23 IST
Last Updated 25 ಮೇ 2022, 10:23 IST
ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)   

ಜೋಹಾನ್ಸ್‌ಬರ್ಗ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂದಿನ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಖಂಡಿತವಾಗಿಯೂ ಮರಳುತ್ತೇನೆ ಎಂದು 'ಮಿಸ್ಟರ್ 360 ಡಿಗ್ರಿ' ಬ್ಯಾಟರ್ ಖ್ಯಾತಿಯ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಖಚಿತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಯಶಸ್ಸಿನಲ್ಲಿ ಅಪಾರ ಕೊಡುಗೆ ಸಲ್ಲಿಸಿರುವ ಡಿವಿಲಿಯರ್ಸ್, ಕಳೆದ ವರ್ಷ ಎಲ್ಲ ಪ್ರಕಾರದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮುಂದಿನ ವರ್ಷ ಡಿವಿಲಿಯರ್ಸ್ ತಂಡಕ್ಕೆ ಮರಳುವ ಕುರಿತು ವಿರಾಟ್ ಕೊಹ್ಲಿ ಸೂಚನೆ ನೀಡಿದ್ದರು.

'ವಿರಾಟ್ ಅದನ್ನು ಖಚಿತಪಡಿಸಿರುವುದರಿಂದ ಸಂತೋಷವಾಗಿದೆ. ನಿಜ ಹೇಳಬೇಕೆಂದರೆ, ನಾನು ಇನ್ನೂ ಏನನ್ನೂ ನಿರ್ಧರಿಸಿಲ್ಲ. ಮುಂದಿನ ವರ್ಷ ಖಂಡಿತವಾಗಿಯೂ ಐಪಿಎಲ್‌ನ ಭಾಗವಾಗಿರುತ್ತೇನೆ. ಆದರೆ ಯಾವ ಪಾತ್ರದ ಮೂಲಕ ಮರಳುತ್ತೇನೆ ಎಂಬುದರ ಬಗ್ಗೆ ಖಚಿತತೆಯಿಲ್ಲ' ಎಂದು 'ವಿಯುಸ್ಪೋರ್ಟ್ಸ್‌'ಗೆ ಡಿವಿಲಿಯರ್ಸ್ ಪ್ರತಿಕ್ರಿಯಿಸಿದ್ದಾರೆ.

'ಬೆಂಗಳೂರಿನಲ್ಲಿ ಕೆಲವು ಪಂದ್ಯಗಳು ನಡೆಯಲಿವೆ ಎಂಬುದು ತಿಳಿದು ಬಂದಿದೆ. ಹಾಗಾಗಿ ನನ್ನ ಎರಡನೇ ತವರಿಗೆ ಹಿಂತಿರುಗಲು ಮತ್ತು ಚಿನ್ನಸ್ವಾಮಿಯಲ್ಲಿ ಪೂರ್ಣ ಪ್ರಮಾಣದ ಕ್ರೀಡಾಂಗಣ ವೀಕ್ಷಿಸಲು ಇಷ್ಟಪಡುತ್ತೇನೆ. ಐಪಿಎಲ್‌ಗೆ ಮರಳುವುದನ್ನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಲಿಯರ್ಸ್, 39.71ರ ಸರಾಸರಿಯಲ್ಲಿ 5,162 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ 40 ಅರ್ಧಶತಕಗಳು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.