ADVERTISEMENT

ICC Team Of The Tournament: ಚಾಂಪಿಯನ್ಸ್ ಟ್ರೋಫಿ ಗೆದ್ದ ನಾಯಕನಿಗಿಲ್ಲ ಸ್ಥಾನ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮಾರ್ಚ್ 2025, 7:25 IST
Last Updated 12 ಮಾರ್ಚ್ 2025, 7:25 IST
<div class="paragraphs"><p>ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ</p></div>

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

   

(ರಾಯಿಟರ್ಸ್ ಚಿತ್ರ)

ದುಬೈ: ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಮುಕ್ತಾಯದ ಬೆನ್ನಲ್ಲೇ ಎಲ್ಲ ತಂಡಗಳನ್ನು ಒಳಗೊಂಡಂತೆ ಅತ್ಯುತ್ತಮ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದೆ.

ADVERTISEMENT

ಆದರೆ ಕುತೂಹಲವೆಂಬಂತೆ ಐಸಿಸಿ 'ಟೀಮ್ ಆಫ್ ದಿ ಟೂರ್ನಮೆಂಟ್‌'ನಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರನ್ನು ಹೆಸರಿಸಿಲ್ಲ. ತಂಡಕ್ಕೆ ನ್ಯೂಜಿಲೆಂಡ್‌ನ ಮಿಚೆಲ್ ಸ್ನಾಂಟನರ್ ನಾಯಕರಾಗಿದ್ದಾರೆ.

ಒಟ್ಟಾರೆ 12 ಆಟಗಾರರನ್ನು ಐಸಿಸಿ ಹೆಸರಿಸಿದೆ. ಈ ಪೈಕಿ ಭಾರತದ ಆರು ಮಂದಿ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ ತಂಡದಲ್ಲಿದ್ದಾರೆ. ಅಕ್ಷರ್ ಪಟೇಲ್ 12ನೇ ಆಟಗಾರ ಆಗಿದ್ದಾರೆ.

ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಹಾಗೂ ಅಫ್ಗಾನಿಸ್ತಾನದ ಇಬ್ರಾಹಿಂ ಜದ್ರಾನ್ ಆರಂಭಿಕರಾಗಿ ಗುರುತಿಸಿಕೊಂಡಿದ್ದಾರೆ. ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ರಚಿನ್ ಎರಡು ಶತಕ ಸೇರಿದಂತೆ 62.75ರ ಸರಾಸರಿಯಲ್ಲಿ 251 ರನ್ ಗಳಿಸಿದ್ದರು. ಅಲ್ಲದೆ ಬೌಲಿಂಗ್‌ನಲ್ಲೂ ಕೈಚಳಕ ತೋರಿದ್ದರು. ಮತ್ತೊಂದೆಡೆ ಇಬ್ರಾಹಿಂ ಜದ್ರಾನ್ ಒಂದು ಶತಕ ಸೇರಿದಂತೆ 72ರ ಸರಾಸರಿಯಲ್ಲಿ 216 ರನ್ ಗಳಿಸಿದ್ದರು.

ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, 54.5ರ ಸರಾಸರಿಯಲ್ಲಿ 218 ರನ್ ಕಲೆ ಹಾಕಿದ್ದರು. ಪಾಕಿಸ್ತಾನ ವಿರುದ್ಧ ಅಜೇಯ ಶತಕ ಗಳಿಸಿದ್ದರು. ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದು, ಎರಡು ಅರ್ಧಶತಕಗಳನ್ನು ಒಳಗೊಂಡಂತೆ 48.6ರ ಸರಾಸರಿಯಲ್ಲಿ 243 ರನ್ ಗಳಿಸಿದ್ದರು.

ಭಾರತದ ಆಪತ್ಭಾಂದವ ಕೆ.ಎಲ್. ರಾಹುಲ್, ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಆಯ್ಕೆಯಾಗಿದ್ದು, 140ರ ಸರಾಸರಿಯಲ್ಲಿ 140 ರನ್ ಗಳಿಸಿದ್ದರು. ನ್ಯೂಜಿಲೆಂಡ್‌ನ ಸೂಪರ್ ಮ್ಯಾನ್ ಗ್ಲೆನ್ ಫಿಲಿಪ್ಸ್, ಆಲ್‌ರೌಂಡರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಫಿಲಿಪ್ಸ್ 177 ರನ್ ಹಾಗೂ ಎರಡು ವಿಕೆಟ್ ಗಳಿಸಿದ್ದರಲ್ಲದೆ ಐದು ಅದ್ಭುತ ಕ್ಯಾಚ್‌ಗಳನ್ನು ಪಡೆದಿದ್ದರು.

ಅಫ್ಗಾನಿಸ್ತಾನದ ಅಜ್ಮತುಲ್ಲಾ ಒಮರ್‌ಝೈ 42ರ ಸರಾಸರಿಯಲ್ಲಿ 126 ರನ್ ಹಾಗೂ ಏಳು ವಿಕೆಟ್‌ಗಳನ್ನು ಗಳಿಸಿದ್ದರು. ಇದರಲ್ಲಿ ಐದು ವಿಕೆಟ್ ಸಾಧನೆಯೂ ಸೇರಿದೆ.

ನಾಯಕ ಮಿಚೆಲ್ ಸ್ನಾಂಟನರ್ 4.80 ಎಕಾನಮಿಯಲ್ಲಿ ಒಟ್ಟು ಒಂಬತ್ತು ವಿಕೆಟ್‌ಗಳನ್ನು ಉರುಳಿಸಿದ್ದರು. ಭಾರತದ ಮೊಹಮ್ಮದ್ ಶಮಿ ಐದು ವಿಕೆಟ್ ಸೇರಿದಂತೆ ಟೂರ್ನಿಯಲ್ಲಿ ಒಟ್ಟು ಒಂಬತ್ತು ವಿಕೆಟ್‌ಗಳನ್ನು ಗಳಿಸಿದ್ದರು.

ಗಾಯದಿಂದಾಗಿ ಫೈನಲ್ ಆಡುವ ಅವಕಾಶ ವಂಚಿತ ನ್ಯೂಜಿಲೆಂಡ್‌ನ ವೇಗದ ಬೌಲರ್ ಮ್ಯಾಟ್ ಹೆನ್ರಿ, ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ್ದರು. ತಂಡದ ಪ್ರಮುಖ ವೇಗಿಯಾಗಿರುವ ಹೆನ್ರಿ, ಐದು ವಿಕೆಟ್ ಸೇರಿದಂತೆ ಒಟ್ಟು 10 ವಿಕೆಟ್‌ಗಳನ್ನು ಗಳಿಸಿದ್ದರು.

ಭಾರತದ 'ಮಿಸ್ಟರಿ' ಸ್ಪಿನ್ನರ್ ವರುಣ್ ಚಕ್ರವರ್ತಿ ಸ್ಪಿನ್ ಅಸ್ತ್ರವಾಗಿದ್ದಾರೆ. ವರುಣ್ ಮೂರು ಪಂದ್ಯಗಳಲ್ಲೇ ಒಂಬತ್ತು ವಿಕೆಟ್ ಉರುಳಿಸಿದ್ದರು. ಅಕ್ಷರ್ ಪಟೇಲ್ 12ನೇ ಆಟಗಾರನಾಗಿದ್ದು, 109 ರನ್ ಹಾಗೂ ಐದು ವಿಕೆಟ್ ಗಳಿಸುವ ಮೂಲಕ ನೈಜ ಆಲ್‌ರೌಂಡರ್ ಎನಿಸಿದ್ದರು.

ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂಡ ಇಂತಿದೆ:

1. ರಚಿನ್ ರವೀಂದ್ರ (ನ್ಯೂಜಿಲೆಂಡ್)

2. ಇಬ್ರಾಹಿಂ ಜದ್ರಾನ್ (ಅಫ್ಗಾನಿಸ್ತಾನ)

3. ವಿರಾಟ್ ಕೊಹ್ಲಿ (ಭಾರತ)

4. ಶ್ರೇಯಸ್ ಅಯ್ಯರ್ (ಭಾರತ)

5. ಕೆ.ಎಲ್. ರಾಹುಲ್ (ವಿಕೆಟ್ ಕೀಪರ್, ಭಾರತ)

6. ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್)

7. ಅಜ್ಮತುಲ್ಲಾ ಒಮರ್‌ಝೈ (ಅಫ್ಗಾನಿಸ್ತಾನ)

8. ಮಿಚೆಲ್ ಸ್ನಾಂಟನರ್ (ನಾಯಕ, ನ್ಯೂಜಿಲೆಂಡ್)

9. ಮೊಹಮ್ಮದ್ ಶಮಿ (ಭಾರತ)

10. ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್)

11. ವರುಣ್ ಚಕ್ರವರ್ತಿ (ಭಾರತ)

12. ಅಕ್ಷರ್ ಪಟೇಲ್ (ಭಾರತ)

ದುಬೈಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿದ್ದ ರೋಹಿತ್ ಶರ್ಮಾ ಮುಂದಾಳತ್ವದ ಟೀಮ್ ಇಂಡಿಯಾ, ಮೂರನೇ ಸಲ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ನಿರ್ಣಾಯಕ ಫೈನಲ್‌ನಲ್ಲಿ 76 ರನ್ ಗಳಿಸಿದ್ದ ರೋಹಿತ್, ಪಂದ್ಯಶ್ರೇಷ್ಠ ಗೌರವಕ್ಕೆ ಅರ್ಹರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.