ADVERTISEMENT

ಡಬ್ಲ್ಯುಟಿಸಿಯಲ್ಲಿ ಬದಲಾವಣೆ | ಏಪ್ರಿಲ್‌ ಸಭೆಯಲ್ಲಿ ನಿರ್ಧಾರ: ಜಯ್‌ ಶಾ

ಪಿಟಿಐ
Published 22 ಮಾರ್ಚ್ 2025, 14:04 IST
Last Updated 22 ಮಾರ್ಚ್ 2025, 14:04 IST
<div class="paragraphs"><p>ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಅಧ್ಯಕ್ಷ ಜಯ್‌ ಶಾ</p></div>

ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಅಧ್ಯಕ್ಷ ಜಯ್‌ ಶಾ

   

ಕೋಲ್ಕತ್ತ: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಮುಂದಿನ (2025–27) ಆವೃತ್ತಿಯಲ್ಲಿ ಉದ್ದೇಶಿತ ಬದಲಾವಣೆಗಳನ್ನು ತರುವುದಕ್ಕೆ ಸಂಬಂಧಿಸಿದಂತೆ ಸೌರವ್ ಗಂಗೂಲಿ ನೇತೃತ್ವದ ಕ್ರಿಕೆಟ್‌ ಸಮಿತಿ ಮುಂದಿನ ತಿಂಗಳು ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಅಧ್ಯಕ್ಷ ಜಯ್‌ ಶಾ ಶನಿವಾರ ಖಚಿತಪಡಿಸಿದರು. 

ಗಂಗೂಲಿ ನೇತೃತ್ವದ 16 ಮಂದಿಯ ಕ್ರಿಕೆಟ್‌ ಸಮಿತಿಯಲ್ಲಿ ವಿ.ವಿ.ಎಸ್‌. ಲಕ್ಷ್ಮಣ್‌, ಡೇನಿಯಲ್ ವೆಟ್ಟೋರಿ, ಮಹೇಲ ಜಯವರ್ಧನೆ, ಶಾನ್ ಪೊಲಾಕ್ ಮೊದಲಾದವರಿದ್ದಾರೆ. ‘ಈ ಸಂಬಂಧ ನಮಗೆ ಪ್ರಸ್ತಾವಗಳು ಬಂದಿವೆ. ಅದರ ಬಗ್ಗೆ ನನಗೆ ಪೂರ್ಣ ಮಾಹಿತಿಯಿಲ್ಲ. ಕ್ರಿಕೆಟ್‌ ಸಮಿತಿ ನಿರ್ಧಾರಕ್ಕೆ ಬರಲಿದೆ’ ಎಂದು ಐಪಿಎಲ್‌ ಉದ್ಘಾಟನಾ ಪಂದ್ಯಕ್ಕೆ ಇಲ್ಲಿಗೆ ಬಂದಿರುವ ಶಾ ತಿಳಿಸಿದರು.

ADVERTISEMENT

ಮೊದಲ ಎರಡು ಆವೃತ್ತಿಗಳಲ್ಲಿ ದೊರೆತ ಪ್ರತಿಕ್ರಿಯೆಗಳ ಆಧಾರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಐಸಿಸಿ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ. ಭಾರಿ ಗೆಲುವುಗಳಿಗೆ ಬೋನಸ್‌ ಪಾಯಿಂಟ್‌ ಮತ್ತು ತವರಿನಿಂದ ಆಚೆ ಗಳಿಸಿದ ಗೆಲುವುಗಳಿಗೆ ಪ್ರೋತ್ಸಾಹದ ರೂಪದಲ್ಲಿ ಹೆಚ್ಚುವರಿ ಪಾಯಿಂಟ್‌ ನೀಡುವ ಪ್ರಸ್ತಾವ ಇವುಗಳಲ್ಲಿ ಪ್ರಮುಖವಾಗಿದೆ. ಐಸಿಸಿ ಮಂಡಳಿಯ ಏಪ್ರಿಲ್‌ ಸಭೆಯಲ್ಲಿ ಈ ಬಗ್ಗೆ ಪರ್ಯಾಲೋಚನೆ ನಡೆಯಲಿದೆ.

ಹಾಲಿ ಇರುವ ವ್ಯವಸ್ಥೆಯಲ್ಲಿ ಗೆಲ್ಲುವ ತಂಡಕ್ಕೆ (ಅಂತರ ಗಣನೆಗೆ ಬರುವುದಿಲ್ಲ) 12 ಪಾಯಿಂಟ್‌, ಟೈ ಆದರಲ್ಲಿ ತಂಡಗಳಿಗೆ 6 ಪಾಯಿಂಟ್‌, ಡ್ರಾ ಆದಲ್ಲಿ 4 ಪಾಯಿಂಟ್‌ ನೀಡಲಾಗುತ್ತಿದೆ. ಆದರೆ ಈ ವ್ಯವಸ್ಥೆಯಲ್ಲಿ ಪ್ರಬಲ ತಂಡಗಳನ್ನು ಮಣಿಸುವ ಕೆಳ ಕ್ರಮಾಂಕದ ತಂಡಗಳ ಶ್ರಮಕ್ಕೆ ನ್ಯಾಯವಾದ ಪ್ರತಿಫಲ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ದ್ವಿಸ್ತರ ವ್ಯವಸ್ಥೆ ಜಾರಿಗೊಳಿಸುವ ವಿಷಯವೂ ಏಪ್ರಿಲ್ ಸಭೆಯಲ್ಲಿ ಮತ್ತೊಮ್ಮೆ ಚರ್ಚೆಗೆ ಒಳಪಡುವ ಸಾಧ್ಯತೆಯಿದೆ. ಕ್ರಿಕೆಟ್‌ ಆಸ್ಟ್ರೇಲಿಯಾ ಇದರ ಪ್ರಬಲ ಪ್ರತಿಪಾದಕ. ಇದರ ಸಮರ್ಥಕರ ಪ್ರಕಾರ ಇದು ಜಾರಿಯಾದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಲಿದೆ. ಆದರೆ ಟೀಕಾಕಾರರ ಪ್ರಕಾರ, ಕೆಳ ಕ್ರಮಾಂಕದ ತಂಡಗಳಿಗೆ ಬೆಳವಣಿಗೆಯ ಅವಕಾಶ ಸೀಮಿತಗೊಳ್ಳಲಿದೆ. 

ಜೂನ್‌ 11ರಂದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಮೂರನೇ ಆವೃತ್ತಿಯ ಫೈನಲ್‌ನಲ್ಲಿ ಸೆಣಸಲಿವೆ.

ಜಿಮ್ನಾಸ್ಟಿಕ್ಸ್: ಪ್ರಣತಿಗೆ ಕಂಚು
ನವದೆಹಲಿ: ಭಾರತದ ಜಿಮ್ನಾಸ್ಟ್‌ ಪ್ರಣತಿ ನಾಯಕ್, ಟರ್ಕಿಯ ಅಂತ್ಯಾಲದಲ್ಲಿ ನಡೆಯುತ್ತಿರುವ ಎಫ್‌ಐಜಿ ಕಲಾತ್ಮಕ ಜಿಮ್ನಾಸ್ಟಿಕ್ಸ್ ಅಪಾರೆಟಸ್‌ ವಿಶ್ವಕಪ್‌ನಲ್ಲಿ ಶನಿವಾರ ಕಂಚಿನ ಪದಕ ಗೆದ್ದುಕೊಂಡರು. ‌ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ 29 ವರ್ಷ ವಯಸ್ಸಿನ ಪ್ರಣತಿ 13.417 ಸ್ಕೋರ್‌ನೊಡನೆ ಮೂರನೇ ಸ್ಥಾನ ಪಡೆದರು. ಅಮೆರಿಕದ ಜಾಯ್ಲಾ ಹಂಗ್ (13.667) ಮತ್ತು ಕ್ಲಾರ್‌ ಪೇಸ್‌ (13.567) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.