
ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು
ನವದೆಹಲಿ: ಬಾಂಗ್ಲಾದೇಶ ತಂಡವನ್ನು ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಕೊಕ್ ನೀಡಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಿಂದ ಬಾಂಗ್ಲಾ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಹಾಕಲಾಗಿತ್ತು. ಅದರಿಂದಾಗಿ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ತಮ್ಮ ತಂಡ ಆಡುವುದಿಲ್ಲ. ತಮ್ಮ ಪಾಲಿನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಬೇಕು ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಒತ್ತಾಯಿಸಿತ್ತು.
ಆದರೆ ಐಸಿಸಿಯು ಭಾರತದಲ್ಲಿಯೇ ಪಂದ್ಯಗಳನ್ನು ಆಡಲು ಬಾಂಗ್ಲಾಕ್ಕೆ ಸೂಚಿಸಿತ್ತು. ಆದರೆ ಬಾಂಗ್ಲಾ ಪಟ್ಟು ಸಡಿಲಿಸಲಿಲ್ಲ. ಸುಮಾರು ಒಂದು ತಿಂಗಳು ನಡೆದ ಈ ಪ್ರಹಸನಕ್ಕೆ ಶನಿವಾರ ಐಸಿಸಿಯು ತೆರೆ ಎಳೆದಿದೆ.
ಐಸಿಸಿ ಮಂಡಳಿಗಳ ಸಭೆಯಲ್ಲಿ ಈ ವಿಷಯದ ಕುರಿತು ಸದಸ್ಯರ ಅಭಿಮತ ಪಡೆಯಲಾಯಿತು. ಬಾಂಗ್ಲಾ ತಂಡವು ಭಾರತದಲ್ಲಿಯೇ ಪಂದ್ಯಗಳನ್ನು ಆಡಬೇಕೆಂಬ ನಿರ್ಣಯವು 14–2 ಮತಗಳಿಂದ ಮೇಲುಗೈ ಸಾಧಿಸಿತು.ಅದರಿಂದಾಗಿ ಬಾಂಗ್ಲಾ ಮಂಡಳಿಗೆ ತನ್ನ ತೀರ್ಮಾನ ವ್ಯಕ್ತಪಡಿಸಲು ಐಸಿಸಿಯು 24 ಗಂಟೆಗಳ ಗಡುವು ನೀಡಿತ್ತು. ಆದರೆ ಬಾಂಗ್ಲಾ ಸರ್ಕಾರದ ಕ್ರೀಡಾ ಸಚಿವಾಲಯದ ಸಲಹೆಗಾರ ಅಸೀಫ್ ನಜ್ರುಲ್ ಅವರು ಐಸಿಸಿ ತೀರ್ಪನ್ನು ಒಪ್ಪಲಿಲ್ಲ. ಇದರಿಂದಾಗಿ ಬಾಂಗ್ಲಾ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದೆ.
ಬಾಂಗ್ಲಾಕ್ಕೆ ಕೊಟ್ಟ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಐಸಿಸಿಯ ಮುಖ್ಯಸ್ಥ ಜಯ್ ಶಾ ಸೇರಿದಂತೆ ಪ್ರಮುಖ ಅಧಿಕಾರಿಗಳು ದುಬೈನ ಕಚೇರಿಯಲ್ಲಿ ಸಭೆ ಸೇರಿದರೆಂದು ಮೂಲಗಳು ಖಚಿತಪಡಿಸಿವೆ. ಇದೇ ಸಂದರ್ಭದಲ್ಲಿ ಬಿಸಿಬಿ ಮುಖ್ಯಸ್ಥ ಅಮಿನುಲ್ ಇಸ್ಲಾಂ ಬುಲ್‌ಬುಲ್ ಅವರಿಗೆ ಟಿವಿ 20 ವಿಶ್ವಕಪ್‌ನಿಂದ ಬಾಂಗ್ಲಾ ತಂಡವನ್ನು ಕೈಬಿಟ್ಟಿರುವುದರ ಕುರಿತು ಇಮೇಲ್ ಮಾಡಲಾಯಿತು ಎಂದು ತಿಳಿದುಬಂದಿದೆ.
‘ಬಿಸಿಬಿಗೆ ಮುಖ್ಯಸ್ಥರಿಗೆ ಐಸಿಸಿ ಇಮೇಲ್ ಮಾಡಿದೆ. 24 ತಾಸುಗಳ ಗಡುವನ್ನು ಬಾಂಗ್ಲಾ ಮೀರಿದೆ. ಅಲ್ಲದೇ ಐಸಿಸಿಗೆ ತನ್ನ ನಿರ್ಣಯ ತಿಳಿಸುವುದಕ್ಕೂ ಮುನ್ನ ಢಾಕಾದಲ್ಲಿ ಬಿಸಿಬಿಯು ಪತ್ರಿಕಾಗೋಷ್ಠಿ ಮಾಡಿತ್ತು. ಅದರಲ್ಲಿ ನಿರ್ಧಾರ ಹೇಳಿತ್ತು. ಇದು ಐಸಿಸಿಯ ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಆದ್ದರಿಂದ ಬಾಂಗ್ಲಾ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನು ಕಳೆದುಕೊಂಡಿದೆ. ಅದರ ಬದಲಿಗೆ ಸ್ಕಾಟ್ಲೆಂಡ್ ತಂಡವು ಸ್ಥಾನ ಪಡೆದಿದೆ’ ಎಂದು ಮೂಲಗಳು ತಿಳಿಸಿವೆ.
ಸ್ಕಾಟ್ಲೆಂಡ್ ತಂಡವು ಗುಂಪು ಹಂತದಲ್ಲಿ ವೆಸ್ಟ್ ಇಂಡೀಸ್ (ಫೆ. 7), ಇಟಲಿ (ಫೆ. 9) ಮತ್ತು ಇಂಗ್ಲೆಂಡ್ (ಫೆ. 14) ವಿರುದ್ಧ ಕೋಲ್ಕತ್ತದಲ್ಲಿ ಪಂದ್ಯಗಳನ್ನು ಆಡಲಿದೆ. ಫೆ.17ರಂದು ಮುಂಬೈನಲ್ಲಿ ನೇಪಾಳ ಎದುರು ಆಡುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.