ADVERTISEMENT

ಏಕದಿನದಲ್ಲಿ ವಿರಾಟ್ ಅಧಿಪತ್ಯಕ್ಕೆ ಕೊನೆ; ಪಾಕ್‌ನ ಬಾಬರ್ ಆಜಂ ನಂ.1

ಏಜೆನ್ಸೀಸ್
Published 14 ಏಪ್ರಿಲ್ 2021, 10:07 IST
Last Updated 14 ಏಪ್ರಿಲ್ 2021, 10:07 IST
ಬಾಬರ್ ಆಜಂ, ವಿರಾಟ್ ಕೊಹ್ಲಿ
ಬಾಬರ್ ಆಜಂ, ವಿರಾಟ್ ಕೊಹ್ಲಿ   

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿರುವ ಪಾಕಿಸ್ತಾನ ತಂಡದ ಕಪ್ತಾನ ಬಾಬರ್ ಆಜಂ, ಅಗ್ರಸ್ಥಾನಕ್ಕೇರಿದ್ದಾರೆ.

26 ವರ್ಷದ ಆಜಂ, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಮತ್ತು ಕೊನೆಯ ಪಂದ್ಯದಲ್ಲಿ 94 ರನ್ ಗಳಿಸಿದ್ದರು. ಈ ಮೂಲಕ ಒಟ್ಟು ರೇಟಿಂಗ್ ಅಂಕಗಳನ್ನು 865ಕ್ಕೆ ಏರಿಸಿದ್ದಾರೆ.

ಅಷ್ಟೇ ಯಾಕೆ ವಿರಾಟ್ ಕೊಹ್ಲಿ ಅವರಿಗಿಂತಲೂ ಎಂಟು ರೇಟಿಂಗ್ ಪಾಯಿಂಟ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.

ADVERTISEMENT

ಇದರೊಂದಿಗೆ ವಿರಾಟ್ ಕೊಹ್ಲಿ ನಂ.1 ಅಧಿಪತ್ಯಕ್ಕೆ ಪಾಕಿಸ್ತಾನದ ಬಾಬರ್ ಆಜಂ ಇತಿಶ್ರೀ ಹಾಡಿದ್ದಾರೆ. ವಿರಾಟ್ ಕೊಹ್ಲಿ 1,258 ದಿನಗಳಿಂದ ಅಗ್ರಸ್ಥಾನದಲ್ಲಿ ವಿರಾಜಮಾನರಾಗಿದ್ದರು.

ಏಕದಿನದಲ್ಲಿ ನಂ.1 ಸ್ಥಾನ ಆಲಂಕರಿಸಿದ ಪಾಕಿಸ್ತಾನದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೂ ಬಾಬರ್ ಆಜಂ ಪಾತ್ರವಾಗಿದ್ದಾರೆ. ಈ ಹಿಂದೆ ಜಹೀರ್ ಅಬ್ಬಾಸ್ (1983-84), ಜಾವೇದ್ ಮಿಯಾಂದಾದ್ (1988-89) ಮತ್ತು ಮೊಹಮ್ಮದ್ ಯೂಸುಫ್ (2003) ಏಕದಿನದಲ್ಲಿ ಅಗ್ರಸ್ಥಾನ ಆಲಂಕರಿಸಿದ್ದರು.

ಏತನ್ಮಧ್ಯೆ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಫರ್ಕ್ರ್ ಜಮಾನ್ ಐದು ಸ್ಥಾನಗಳ ನೆಗೆತ ಕಂಡು ಜೀವನಶ್ರೇಷ್ಠ 7ನೇ ಸ್ಥಾನಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಜಮಾನ್, 194 ರನ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.