ADVERTISEMENT

ICC Rankings: ಸ್ಮೃತಿಗೆ ಅಗ್ರಸ್ಥಾನ ನಷ್ಟ; ಅಗ್ರ 10ರ ಪಟ್ಟಿಗೆ ಜೆಮಿಮಾ ಲಗ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2025, 10:00 IST
Last Updated 4 ನವೆಂಬರ್ 2025, 10:00 IST
<div class="paragraphs"><p>ಲಾರಾ ವೋಲ್ವಾರ್ಟ್‌, ಸ್ಮೃತಿ ಮಂದಾನ</p></div>

ಲಾರಾ ವೋಲ್ವಾರ್ಟ್‌, ಸ್ಮೃತಿ ಮಂದಾನ

   

(ಚಿತ್ರ ಕೃಪೆ: ಐಸಿಸಿ)

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಮಹಿಳಾ ಏಕದಿನ ಕ್ರಿಕೆಟ್‌ನ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರಿಗೆ ಅಗ್ರಸ್ಥಾನ ನಷ್ಟವಾಗಿದೆ.

ADVERTISEMENT

ಸ್ಮೃತಿ ಅವರನ್ನು ಹಿಂದಿಕ್ಕಿರುವ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಟ್‌ ನಂ.1 ಸ್ಥಾನ ಅಲಂಕರಿಸಿದ್ದಾರೆ. ಲಾರಾ ವೋಲ್ವಾರ್ಟ್‌ 814 ಹಾಗೂ ಸ್ಮೃತಿ ಮಂದಾನ 811 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

ಇದೀಗಷ್ಟೇ ಅಂತ್ಯಗೊಂಡ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮಣಿಸಿದ ಭಾರತ ಚೊಚ್ಚಲ ಕಿರೀಟ ಎತ್ತಿ ಹಿಡಿದಿತ್ತು.

ರನ್ ಬೇಟೆಯಲ್ಲಿ ಅಗ್ರಸ್ಥಾನ ಪಡೆದಿದ್ದ ವೋಲ್ವಾರ್ಟ್‌, ಒಂಬತ್ತು ಪಂದ್ಯಗಳಲ್ಲಿ 71.37ರ ಸರಾಸರಿಯಲ್ಲಿ ಒಟ್ಟು 571 ರನ್ ಪೇರಿಸಿದ್ದರು. ಎರಡನೇ ಸ್ಥಾನದಲ್ಲಿರುವ ಸ್ಮೃತಿ ಅಷ್ಟೇ ಪಂದ್ಯಗಳಲ್ಲಿ 54.25ರ ಸರಾಸರಿಯಲ್ಲಿ 434 ರನ್ ಗಳಿಸಿದ್ದರು.

ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ವೋಲ್ವಾರ್ಟ್‌ ಶತಕ ಸಾಧನೆ ಮಾಡಿದ್ದರು.

ಅಗ್ರ 10ರ ಪಟ್ಟಿಗೆ ಜೆಮಿಮಾ ಲಗ್ಗೆ...

ಈ ನಡುವೆ ಭಾರತದ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಒಂಬತ್ತು ಸ್ಥಾನಗಳ ಬಡ್ತಿ ಪಡೆದು ಅಗ್ರ 10ರ ಪಟ್ಟಿಗೆ ಲಗ್ಗೆ ಇಟ್ಟಿದ್ದಾರೆ.

ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಗಳಿಸಿದ್ದ ಜೆಮಿಮಾ ಒಟ್ಟು 658 ರೇಟಿಂಗ್ ಅಂಕಗಳನ್ನು ಪಡೆದಿದ್ದಾರೆ.

ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ನಾಲ್ಕು ಸ್ಥಾನಗಳ ಬಡ್ತಿ ಪಡೆದು 14ಕ್ಕೆ ತಲುಪಿದ್ದಾರೆ. ದೀಪ್ತಿ ಶರ್ಮಾ ಮೂರು ಸ್ಥಾನ ಏರಿಕೆ ಕಂಡಿದ್ದು, 21ನೇ ಸ್ಥಾನ ಪಡೆದಿದ್ದಾರೆ.

ಏಕದಿನ ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ದೀಪ್ತಿ ಶರ್ಮಾ, ಐದು ಹಾಗೂ ಆಲ್‌ರೌಂಡ್ ಆಟಗಾರ್ತಿಯರ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.