
ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು
ನವದೆಹಲಿ: ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಮಾಡಿರುವ ಮನವಿಯನ್ನು ತಾನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಸೋಮವಾರ ಸುಳಿವು ನೀಡಿದೆ.
ಭಾರತದಲ್ಲಿ ತನ್ನ ತಂಡ ಆಡುವುದಕ್ಕೆ ಸಂಬಂಧಿಸಿ ಭದ್ರತೆ ವ್ಯವಸ್ಥೆಯ ಬಗ್ಗೆ ಅಲ್ಲಿನ ಮಂಡಳಿ ವ್ಯಕ್ತಪಡಿಸಿರುವ ಕಳವಳವು ಪರಿಣಾಮಕಾರಿ ಮಟ್ಟದಲ್ಲಿಲ್ಲ ಎಂದು ಐಸಿಸಿ ಅಭಿಪ್ರಾಯಪಟ್ಟಿದೆ.
ಫೆಬ್ರುವರಿ 7ರಂದು ಆರಂಭವಾಗುವ ಟೂರ್ನಿಯಲ್ಲಿ ಪಾಲ್ಗೊಂಡಲ್ಲಿ ಬಾಂಗ್ಲಾದೇಶ ತಂಡಕ್ಕೆ ನಿರ್ದಿಷ್ಟ ಅಥವಾ ನೇರ ಬೆದರಿಕೆಯಂಥ ಅಪಾಯ ಕಾಣಿಸುತ್ತಿಲ್ಲ ಎಂಬ ಅಂಶವು ಸುರಕ್ಷತೆಗೆ ಸಂಬಂಧಿಸಿ ಐಸಿಸಿಯು ಸಿದ್ಧಪಡಿಸಿದ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಭದ್ರತೆಗೆ ಸಂಬಂಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಿರುವ ತಜ್ಞರಿಂದ ಐಸಿಸಿಯು ಸ್ವತಂತ್ರ್ಯವಾಗಿ ಮೌಲ್ಯಮಾಪನ ನಡೆಸಿದೆ. ಬಾಂಗ್ಲಾದೇಶ ತಂಡವು ಭಾರತದಲ್ಲಿ ಆಡುವುದಕ್ಕೆ ಯಾವುದೇ ಭದ್ರತಾ ಸಮಸ್ಯೆ ಎದುರಾಗದು ಎಂದು ತಜ್ಞರ ತಂಡ ತೀರ್ಮಾನಕ್ಕೆ ಬಂದಿದೆ’ ಎಂದು ಐಸಿಸಿಯ ಮೂಲವು ಹೇಳಿದೆ.
ಸಂಪೂರ್ಣ ಸುಳ್ಳು: ಭಾರತದಲ್ಲಿ ಆಡುವ ಕುರಿತಂತದೆ ಬಿಸಿಸಿ ವ್ಯಕ್ತಪಡಿಸಿರುವ ನಿರ್ದಿಷ್ಟ ಭದ್ರತಾ ಕಳವಳವನ್ನು ಐಸಿಸಿ ಒಪ್ಪಿಕೊಂಡಿದೆ ಎಂದು ಬಾಂಗ್ಲಾದೇಶ ಕ್ರೀಡಾ ಸಲಹೆಗಾರ ಆಸಿಫ್ ನಝ್ರುಲ್ ಹೇಳಿದ್ದರು. ಆದರೆ ಅವರ ಹೇಳಿಕೆಯ ಸಂಪೂರ್ಣ ಸುಳ್ಳು ಎಂದು ಐಸಿಸಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.