
ಹೀದರ್ ನೈಟ್
(ಚಿತ್ರ ಕೃಪೆ: ಐಸಿಸಿ)
ಇಂದೋರ್: ಹೀದರ್ ನೈಟ್ ಬಾರಿಸಿದ ಆಕರ್ಷಕ ಶತಕದ (109) ನೆರವಿನಿಂದ ಇಂಗ್ಲೆಂಡ್ ತಂಡವು ಆತಿಥೇಯ ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 288 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.
ಇಂದೋರ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಇಂಗ್ಲೆಂಡ್ ನಾಯಕಿ ನಾಟ್ ಶಿವರ್ ಬ್ರಂಟ್ ಅವರ ನಿರ್ಧಾರವನ್ನು ಸರಿ ಎಂದು ಸಾಬೀತುಪಡಿಸಿದ ಆರಂಭಿಕ ಆಟಗಾರ್ತಿಯರಾದ ಟ್ಯಾಮಿ ಬ್ಯೂಮಂಟ್ (22) ಹಾಗೂ ಎಮಿ ಜೋನ್ಸ್ (56) ಮೊದಲ ವಿಕೆಟ್‌ಗೆ 73 ರನ್‌ಗಳ ಜೊತೆಯಾಟ ಕಟ್ಟಿದರು.
ಈ ಪೈಕಿ ಎಮಿ ಜೋನ್ಸ್ ಆಕರ್ಷಕ ಅರ್ಧಶತಕ ಗಳಿಸಿದರು. ನಾಯಕಿ ಬ್ರಂಟ್ 38 ರನ್‌ಗಳ ಕಾಣಿಕೆ ನೀಡಿದರು.
ಅತ್ತ ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದು ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಹೀದರ್ ನೈಟ್, ಅಮೋಘ ಶತಕದ ಸಾಧನೆ ಮಾಡಿದರು.
91 ಎಸೆತಗಳಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 109 ರನ್ ಗಳಿಸಿ ಅಬ್ಬರಿಸಿದರು.
ಇದು ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಹಾಗೂ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಹೀದರ್ ದಾಖಲಿಸಿದ ಎರಡನೇ ಶತಕವಾಗಿದೆ.
ಭಾರತದ ಪರ ದೀಪ್ತಿ ಶರ್ಮಾ 51 ರನ್ನಿಗೆ ನಾಲ್ಕು ವಿಕೆಟ್ ಗಳಿಸಿದರು. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್ ಗಳಿಸಿದ ಭಾರತದ ಎರಡನೇ ಬೌಲರ್ ಎನಿಸಿದ್ದಾರೆ.
ಭಾರತಕ್ಕೆ ಗೆಲುವು ಅನಿವಾರ್ಯ...
ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಭಾನುವಾರ) ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಇಂಗ್ಲೆಂಡ್ ಸವಾಲನ್ನು ಎದುರಿಸುತ್ತಿದೆ.
ಇಂದೋರ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕಿ ನಾಟ್ ಶಿವರ್ ಬ್ರಂಟ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಭಾರತ ಸೆಮಿಫೈನಲ್ ರೇಸ್‌ನಲ್ಲಿ ಇರಬೇಕಾದರೆ ಉಳಿದಿರುವ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಇದೆ.
ಮೊದಲೆರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ಭಾರತ ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಆದರೆ ಸತತ ಎರಡು ಸೋಲುಗಳಿಂದ ಹಿನ್ನಡೆ ಅನುಭವಿಸಿತ್ತು. ವಿಶಾಖಪಟ್ಟಣದಲ್ಲಿ ಆತಿಥೇಯ ತಂಡವು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಎದುರು ಮೂರು ವಿಕೆಟ್‌ಗಳ ಸೋಲನುಭವಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.