ADVERTISEMENT

ಮಹಿಳಾ ಟಿ20 ವಿಶ್ವಕಪ್‌: ಭಾರತಕ್ಕೆ ಇಂದು ಪಾಕಿಸ್ತಾನ ಸವಾಲು

ಪಿಟಿಐ
Published 12 ಫೆಬ್ರುವರಿ 2023, 5:46 IST
Last Updated 12 ಫೆಬ್ರುವರಿ 2023, 5:46 IST
ಶಫಾಲಿ ವರ್ಮಾ– ಎಎಫ್‌ಪಿ ಚಿತ್ರ
ಶಫಾಲಿ ವರ್ಮಾ– ಎಎಫ್‌ಪಿ ಚಿತ್ರ   

ಕೇಪ್‌ಟೌನ್‌: ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಭಾರತ ತಂಡವು ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಪಾಕಿಸ್ತಾನ ಸವಾಲು ಎದುರಿಸಲಿದ್ದು ಶುಭಾರಂಭದ ನಿರೀಕ್ಷೆಯಲ್ಲಿದೆ.

ಚೊಚ್ಚಲ ಮಹಿಳಾ ಪ್ರೀಮಿಯರ್‌ ಲೀಗ್‌ಗೂ ಒಂದು ದಿನ ಮೊದಲು ನಡೆಯಲಿರುವ ಈ ಪಂದ್ಯವು ಭಾರತದ ಆಟಗಾರ್ತಿಯರಿಗೆ ಉತ್ತಮ ಸಾಮರ್ಥ್ಯ ತೋರಲು ವೇದಿಕೆ ಎನಿಸಿದೆ.

ನಾಯಕಿ ಹರ್ಮನ್‌ಪ್ರೀತ್ ಕೌರ್ (ಭುಜದ ಗಾಯ) ಮತ್ತು ಸ್ಮೃತಿ ಮಂದಾನ (ಬೆರಳು) ಅವರ ಗಾಯದ ಸಮಸ್ಯೆ ಭಾರತ ತಂಡದ ಕಳವಳಕ್ಕೆ ಕಾರಣವಾಗಿದೆ. ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಸೋತು ಬಾಂಗ್ಲಾ ಎದುರು ಗೆದ್ದಿತ್ತು.

ADVERTISEMENT

ರೇಣುಕಾ ಸಿಂಗ್ ಅವರನ್ನು ಹೊರತುಪಡಿಸಿ ಭಾರತದ ಬೌಲಿಂಗ್‌ ವಿಭಾಗವು ಅಷ್ಟೇನೂ ವಿಶ್ವಾಸ ಮೂಡಿಸುವಂತಿಲ್ಲ. ಶಿಖಾ ಪಾಂಡೆ ಮಿಂಚಬೇಕಿದೆ. ಬ್ಯಾಟಿಂಗ್‌ನಲ್ಲಿ ಹರ್ಮನ್‌ಪ್ರೀತ್ ಮತ್ತು ಮಂದಾನ ಅವರಿಗೆ ಉಳಿದವರು ನೆರವು ನೀಡಬೇಕು. ಶಫಾಲಿ ವರ್ಮಾ ಸ್ಥಿರ ಪ್ರದರ್ಶನ ತೋರಬೇಕಿದೆ. ಜೆಮಿಮಾ ರಾಡ್ರಿಗಸ್‌ ಅವರ ಮೇಲೆ ರನ್‌ ಗಳಿಸುವ ಒತ್ತಡವಿದೆ. ಆಲ್‌ರೌಂಡರ್‌ ಪೂಜಾ ವಸ್ತ್ರಕರ್ ಅವರ ಪ್ರದರ್ಶನವೂ ನಿರ್ಣಾಯಕ ಎನಿಸಿದೆ. ಪಾಕಿಸ್ತಾನ ತಂಡವು ನಿದಾ ಧರ್ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ.

ಶ್ರೀಲಂಕಾಕ್ಕೆ ರೋಚಕ ಜಯ: ಶ್ರೀಲಂಕಾ ತಂಡವು ಟಿ20 ವಿಶ್ವಕಪ್ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮೂರು ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರು
ಶ್ರೀಲಂಕಾ:
20 ಓವರ್‌ಗಳಲ್ಲಿ 4ಕ್ಕೆ 129 (ಚಾಮರಿ ಅಟಪಟ್ಟು 68, ವಿಶ್ಮಿ ಗುಣರತ್ನೆ 35; ಶಬ್ನಿಮ್ ಇಸ್ಮಾಯಿಲ್‌ 22ಕ್ಕೆ 1, ಮರಿಜಾನ್ ಕಾಪ್‌ 15ಕ್ಕೆ 1, ನದೈನ್ ಡಿ ಕ್ಲರ್ಕ್‌ 38ಕ್ಕೆ 1).
ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 9ಕ್ಕೆ 126 (ಲೌರಾ ವೊಲ್‌ವಾರ್ಟ್‌ 18, ಸ್ಯೂನ್ ಲೂಸ್‌ 28; ಸುಗಂಧಿಕಾ ಕುಮಾರಿ 28ಕ್ಕೆ 2, ಒಶಾದಿ ರಣಸಿಂಗೆ 20ಕ್ಕೆ 2, ಇನೊಕಾ ರಣವೀರ 18ಕ್ಕೆ 3).
ಫಲಿತಾಂಶ: ಶ್ರೀಲಂಕಾಕ್ಕೆ 3 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.