
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡ
ಪಿಟಿಐ ಚಿತ್ರ
ದುಬೈ: ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ್ತಿಯರು ನಿರೀಕ್ಷೆಯಂತೆ ಐಸಿಸಿ ಪ್ರಕಟಿಸಿದ ಮಹಿಳಾ ವಿಶ್ವಕಪ್ 2025ರ ಅತ್ಯುತ್ತಮ ತಂಡದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಐಸಿಸಿ ಘೋಷಿಸಿರುವ 11+1 ಆಟಗಾರ್ತಿಯರ ತಂಡದಲ್ಲಿ ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ ಸ್ಥಾನ ಪಡೆದಿದ್ದಾರೆ.
ಭಾರತ ಮಹಿಳಾ ತಂಡ ತನ್ನ ಚೊಚ್ಚಲ ವಿಶ್ವಕಪ್ ಗೆಲ್ಲುವಲ್ಲಿ ಮಂದಾನ, ಜೆಮಿಮಾ ಹಾಗೂ ದೀಪ್ತಿ ಶರ್ಮಾ ಅವರ ಪಾತ್ರ ಮಹತ್ವದ್ದಾಗಿದೆ. ಲೀಗ್ ಹಂತದಲ್ಲಿ ಮಂದಾನ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ, ಜೆಮಿಮಾ ಸೆಮಿಫೈನಲ್‌ನಲ್ಲಿ ಏಕಾಂಗಿ ಹೋರಾಟ ನಡೆಸಿ ರೋಚಕ ಗೆಲುವು ತಂದುಕೊಟ್ಟಿದ್ದರು. ಇದರ ಜೊತೆಗೆ ದೀಪ್ತಿ ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇನ್ನು ಫೈನಲ್‌ನಲ್ಲಿ ಭಾರತ ವಿರುದ್ಧ ಸೋತು ರನ್ನರ್ಸ್ ಅಪ್ ಆಗಿರುವ ದಕ್ಷಿಣ ಆಫ್ರಿಕಾ ತಂಡದಿಂದಲೂ ಮೂವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಐಸಿಸಿ ಘೋಷಿಸಿರುವ ತಂಡಕ್ಕೆ ಲಾರಾ ವೋಲ್ವಾರ್ಡ್ಟ್ ನಾಯಕಿಯಾಗಿದ್ದಾರೆ. ಅವರು ಟೂರ್ನಮೆಂಟ್‌ನಲ್ಲಿ 71.37ರ ಸರಾಸರಿಯಲ್ಲಿ 571 ರನ್ ಗಳಿಸಿ ಗರಿಷ್ಠ ರನ್ ಗಳಿಸಿದ ದಾಖಲೆ ಮಾಡಿದ್ದಾರೆ. ಇವರ ಜೊತೆಗೆ ನಾಡಿನ್ ಡಿ ಕ್ಲರ್ಕ್ ಹಾಗೂ ಮಾರಿಜಾನ್ನೆ ಕಪ್ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ತಂಡದಿಂದ ಅನ್ನಾಬೆಲ್ ಸದರ್ಲ್ಯಾಂಡ್, ಆ್ಯಶ್ಲೆ ಗಾರ್ಡನರ್ ಮತ್ತು ಸ್ಪಿನ್ನರ್ ಅಲಾನಾ ಕಿಂಗ್ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ಸಿದ್ರಾ ನವಾಜ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಐಸಿಸಿ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಇಂಗ್ಲೆಂಡ್ ತಂಡದಿಂದ ಸೋಫಿ ಎಕ್ಲೆಸ್ಟೋನ್ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ 12ನೇ ಆಟಗಾರ್ತಿಯಾಗಿ ನ್ಯಾಟ್ ಸಿವರ್-ಬ್ರಂಟ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಐಸಿಸಿ ಮಹಿಳಾ ವಿಶ್ವಕಪ್ ತಂಡ:
1. ಸ್ಮೃತಿ ಮಂದಾನ (ಭಾರತ)
2. ಲಾರಾ ವೊಲ್ವಾರ್ಡ್ಟ್ (ನಾಯಕಿ) (ದಕ್ಷಿಣ ಆಫ್ರಿಕಾ)
3. ಜೆಮಿಮಾ ರಾಡ್ರಿಗಸ್ (ಭಾರತ)
4. ಮಾರಿಜಾನ್ನೆ ಕಪ್ (ದಕ್ಷಿಣ ಆಫ್ರಿಕಾ)
5. ಆ್ಯಶ್ಲೆ ಗಾರ್ಡನರ್ (ಆಸ್ಟ್ರೇಲಿಯಾ)
6. ದೀಪ್ತಿ ಶರ್ಮಾ (ಭಾರತ)
7. ಅನ್ನಾಬೆಲ್ ಸದರ್‌ಲ್ಯಾಂಡ್ (ಆಸ್ಟ್ರೇಲಿಯಾ)
8. ನಾಡಿನ್ ಡಿ ಕ್ಲರ್ಕ್ (ದಕ್ಷಿಣ ಆಫ್ರಿಕಾ)
9. ಸಿದ್ರಾ ನವಾಜ್ (ವಿಕೆಟ್ ಕೀಪರ್) (ಪಾಕಿಸ್ತಾನ)
10. ಅಲಾನಾ ಕಿಂಗ್ (ಆಸ್ಟ್ರೇಲಿಯಾ)
11. ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್)
12 ನೇ ಆಟಗಾರ್ತಿ: ನ್ಯಾಟ್ ಸಿವರ್-ಬ್ರಂಟ್ (ಇಂಗ್ಲೆಂಡ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.