ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸಾ ಹೀಲಿ
–ಎಎಫ್‌ಪಿ ಚಿತ್ರ
ಇಂದೋರ್: ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಬುಧವಾರ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಎದುರಿನ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿದೆ.
ಅಲಿಸಾ ಹೀಲಿ ನಾಯಕತ್ವದ ಆಸ್ಟ್ರೇಲಿಯಾ ತಂಡಕ್ಕೆ ಕಿವೀಸ್ ವನಿತೆಯರು ಕಠಿಣ ಸವಾಲೊಡ್ಡುವ ಸಮರ್ಥರು. ಕಿವೀಸ್ ತಂಡವು ಟಿ20 ವಿಶ್ವಕಪ್ ಕ್ರಿಕೆಟ್‌ನ ಹಾಲಿ ಚಾಂಪಿಯನ್ ಕೂಡ ಹೌದು. ಆದರೆ ಆಸ್ಟ್ರೇಲಿಯಾದ ಆಟಗಾರ್ತಿಯರು, ಅನುಭವ, ಕೌಶಲ ಮತ್ತು ತಂತ್ರಗಾರಿಕೆಯಲ್ಲಿ ಕಿವೀಸ್ ಪಡೆಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ.
ಆಸ್ಟ್ರೇಲಿಯಾ ತಮಡದ ಎಡಗೈ ಸ್ಪಿನ್ನರ್ ಸೋಫಿ ಮಾಲಿನೆ ಮತ್ತು ಲೆಗ್‌ಸ್ಪಿನ್ನರ್ ಜಾರ್ಜಿಯಾ ವೆರ್ಹಾಮ್ ಅವರು ಗಾಯದಿಂದ ಚೇತರಿಸಿಕೊಂಡಿದ್ದಾರೆ. ಕಣಕ್ಕಿಳಿಯಲಿರುವ ಹನ್ನೊಂದರ ಬಳಗದಲ್ಲಿ ಅವರಿಗೆ ಅವಕಾಶ ಕೊಡುವುದರತ್ತ ಆಸ್ಟ್ರೇಲಿಯಾ ತಂಡದ ವ್ಯವಸ್ಥಾಪನ ಮಂಡಳಿ ಯೋಚಿಸುತ್ತಿದೆ. ಇವರಿಬ್ಬರಲ್ಲೇ ಅಲಾನಾ ಕಿಂಗ್ ಕೂಡ ಸ್ಥಾನದ ಆಕಾಂಕ್ಷಿಯಾಗಿದ್ಧಾರೆ.
ವೇಗದ ಬೌಲರ್‌ಗಳಲ್ಲಿ ಮೇಗನ್ ಶುಟ್, ಅನಾಬೆಲ್ ಸದರ್ಲೆಂಡ್, ಎಲೀಸ್ ಪೆರಿ, ತಹಿಲಿಯಾ ಮೆಕ್‌ಗ್ರಾ ಮತ್ತು ಡಾರ್ಸಿ ಬ್ರೌನ್ ಅವರೆಲ್ಲರೂ ಪಂದ್ಯ ಗೆಲ್ಲಿಸಿಕೊಡುವ ಸಮರ್ಥರಾಗಿದ್ದಾರೆ. ಪಿಚ್ ಪರಿಸ್ಥಿತಿಯ ಅವಲೋಕನದ ನಂತರ ಅವರಲ್ಲಿ ಇಬ್ಬರು ಅಥವಾ ಮೂವರು ಕಣಕ್ಕಿಳಿಯಬಹುದು.
ಬ್ಯಾಟಿಂಗ್ ವಿಭಾಗದಲ್ಲಿ ಬೆತ್ ಮೂನಿ, ಫೊಬಿ ಲಿಚ್‌ಫೀಲ್ಡ್, ಆ್ಯಷ್ಲೆ ಗಾರ್ಡನರ್ ಹಾಗೂ ಅಲಿಸಾ ಅವರ ಆಟವೇ ನಿರ್ಣಾಯಕವಾಗಲಿದೆ. ಈಚೆಗೆ ಉತ್ತಮವಾಗಿ ಆಡುತ್ತಿರುವ ಜಾರ್ಜಿಯಾ ವೊಲ್ ಕೂಡ ತಂಡದ ಬಲ ಹೆಚ್ಚಿಸುವ ಆಟಗಾರ್ತಿ.
ನ್ಯೂಜಿಲೆಂಡ್ ತಂಡವು ಉತ್ತಮ ಪೂರ್ವ ಸಿದ್ಧತೆಯೊಂದಿಗೆ ಕಣಕ್ಕಿಳಿಯುತ್ತಿದೆ. ಚೆನ್ನೈನ ಸಿಎಸ್‌ಕೆ ಅಕಾಡೆಮಿ, ಅಬುಧಾಬಿ ಹಾಗೂ ಬೆಂಗಳೂರಿನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಿತ್ತು. ಸೂಝಿ ಬೇಟ್ಸ್, ಅಮೆಲಿಯಾ ಕೆರ್, ಈಡನ್ ಕಾರ್ಸನ್, ಮ್ಯಾಡಿ ಗ್ರೀನ್, ಬ್ರೂಕ್ ಹಾಲಿಡೆ ಅವರು ಪ್ರಮುಖರಾಗಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.