
ಸ್ಮೃತಿ ಮಂದಾನ
(ಪಿಟಿಐ ಚಿತ್ರ)
ನವಿ ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಭಾನುವಾರ) ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಸ್ಮರಣೀಯ ದಾಖಲೆಯೊಂದನ್ನು ಬರೆದಿದ್ದಾರೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಭಾಜನರಾಗಿದ್ದಾರೆ.
ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಶೆಫಾಲಿ ವರ್ಮಾ ಅವರೊಂದಿಗೆ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ಕಟ್ಟಿದ ಸ್ಮೃತಿ, 45 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.
ಇದರೊಂದಿಗೆ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್‌ನಲ್ಲಿ ಒಂಬತ್ತು ಇನಿಂಗ್ಸ್‌ಗಳಲ್ಲಾಗಿ 54.25ರ ಸರಾಸರಿಯಲ್ಲಿ ಒಟ್ಟು 434 ರನ್ ಪೇರಿಸಿರುವ ಸ್ಮೃತಿ, ಮಾಜಿ ನಾಯಕಿ ಮಿಥಾಲಿ ರಾಜ್ ದಾಖಲೆಯನ್ನು ಮುರಿದಿದ್ದಾರೆ.
2017ರ ವಿಶ್ವಕಪ್ ಆವೃತ್ತಿಯಲ್ಲಿ ಮಿಥಾಲಿ 45.44ರ ಸರಾಸರಿಯಲ್ಲಿ 409 ರನ್ ಗಳಿಸಿದ್ದರು.
ಒಟ್ಟಾರೆಯಾಗಿ 2025ರ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಸಾಲಿನಲ್ಲಿ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಟ್ (470) ನಂತರದ ಸ್ಥಾನದಲ್ಲಿ ಸ್ಮೃತಿ ಕಾಣಿಸಿಕೊಂಡಿದ್ದಾರೆ.
2025ರಲ್ಲಿ ಸ್ಮೃತಿ ವೈಭವ...
ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್‌ನಲ್ಲಿ ರನ್ ಬೇಟೆಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಮೃತಿ, 23 ಇನಿಂಗ್ಸ್‌ಗಳಲ್ಲಿ 61.90ರ ಸರಾಸರಿಯಲ್ಲಿ 1,362 ರನ್ ಪೇರಿಸಿದ್ದಾರೆ. ಇದರಲ್ಲಿ ಐದು ಶತಕಗಳು ಸೇರಿವೆ.
ಸ್ಮೃತಿ ಮಂದಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.