ADVERTISEMENT

ICC Womens WC: ಸೆಮೀಸ್‌ನಲ್ಲಿ ಭಾರತಕ್ಕೆ ಬಲಿಷ್ಠ ಆಸೀಸ್ ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2025, 2:12 IST
Last Updated 27 ಅಕ್ಟೋಬರ್ 2025, 2:12 IST
   

ಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 2025ನೇ ಸಾಲಿನ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ರೋಚಕ ಹಂತಕ್ಕೆ ತಲುಪಿದೆ.

ಸೆಮಿಫೈನಲ್ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದ್ದು, ಚೊಚ್ಚಲ ಕಿರೀಟದ ನಿರೀಕ್ಷೆಯಲ್ಲಿರುವ ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ.

ಇದಕ್ಕೂ ಮೊದಲು ಅಕ್ಟೋಬರ್ 29ರಂದು ಗುವಾಹಟಿಯಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಣಸಲಿವೆ.

ADVERTISEMENT

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಸೆಮಿಫೈನಲ್ ಪಂದ್ಯವು ಅಕ್ಟೋಬರ್ 30ರಂದು ನವಿ ಮುಂಬೈಯಲ್ಲಿ ನಡೆಯಲಿದೆ.

ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಅಜೇಯವಾಗಿ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ, ಏಳು ಪಂದ್ಯಗಳಲ್ಲಿ ಪೈಕಿ 6ರಲ್ಲಿ ಗೆದ್ದು ಒಟ್ಟು 13 ಅಂಕಗಳನ್ನು ಸಂಪಾದಿಸಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಅತ್ತ ಭಾರತ ತಂಡವು ನಾಲ್ಕನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಏಳು ಪಂದ್ಯಗಳಲ್ಲಿ ತಲಾ ಮೂರು ಗೆಲುವು ಹಾಗೂ ಸೋಲಿನೊಂದಿಗೆ ಏಳು ಅಂಕಗಳನ್ನು ಗಳಿಸಿತು.

ಲೀಗ್ ಹಂತದಲ್ಲಿ ಇತ್ತಂಡಗಳು ಮುಖಾಮುಖಿಯಾದಾಗ ಗೆಲುವು ಆಸ್ಟ್ರೇಲಿಯಾದ ಪಾಲಾಗಿತ್ತು. ಭಾರತ ಒಡ್ಡಿದ 331 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸೀಸ್ ಮೂರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಹಾಗಾಗಿ ಫೈನಲ್ ತಲುಪಲು ಹರ್ಮನ್‌ಪ್ರೀತ್ ಬಳಗವು ತನ್ನ ಶ್ರೇಷ್ಠ ಪ್ರದರ್ಶನವನ್ನೇ ನೀಡಬೇಕಿದೆ.

ಐಸಿಸಿ ಮಹಿಳಾ ಟೂರ್ನಿಯ ಬಹುನಿರೀಕ್ಷಿತ ಫೈನಲ್ ಪಂದ್ಯವು ನವೆಂಬರ್ 2, ಭಾನುವಾರದಂದು ನವಿ ಮುಂಬೈಯಲ್ಲಿ ನಡೆಯಲಿದೆ.

ಅಂಕಪಟ್ಟಿ ಇಂತಿದೆ:

ಚಿತ್ರ ಕೃಪೆ: ಐಸಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.