ADVERTISEMENT

ICC Womens World Cup: ಮಂದಾನ, ಕೌರ್ ಶತಕ; ವಿಂಡೀಸ್ ಗೆಲುವಿಗೆ 318 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮಾರ್ಚ್ 2022, 5:55 IST
Last Updated 12 ಮಾರ್ಚ್ 2022, 5:55 IST
ಸ್ಮೃತಿ ಮಂದಾನ ಹಾಗೂ ಹರ್ಮನ್‌ಪ್ರೀತ್‌ ಕೌರ್‌ (ಚಿತ್ರಕೃಪೆ: ಐಸಿಸಿ ಟ್ವಿಟರ್)
ಸ್ಮೃತಿ ಮಂದಾನ ಹಾಗೂ ಹರ್ಮನ್‌ಪ್ರೀತ್‌ ಕೌರ್‌ (ಚಿತ್ರಕೃಪೆ: ಐಸಿಸಿ ಟ್ವಿಟರ್)   

ಹ್ಯಾಮಿಲ್ಟನ್:ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂದಾನ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಗಳಿಸಿದ ಅಮೋಘ ಶತಕಗಳ ಬಲದಿಂದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 317 ರನ್ ಕಲೆಹಾಕಿದೆ.

ಸೆಡನ್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್‌ ಆರಂಭಿಸಿದ ಅನುಭವಿ ಬ್ಯಾಟರ್‌ ಸ್ಮೃತಿ ಮಂದಾನ ಮತ್ತು ಯುವ ಆಟಗಾರ್ತಿ ಯಸ್ತಿಕಾ ಭಾಟಿಯಾ ಮೊದಲ ವಿಕೆಟ್‌ಗೆ 49 ರನ್ ಜೊತೆಯಾಟವಾಡಿದರು.

ಯಸ್ತಿಕಾ, 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ‌ನಾಯಕಿ ಮಿಥಾಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ADVERTISEMENT

ಈ ಹಂತದಲ್ಲಿ ಮಂದಾನ ಹಾಗೂ ಹರ್ಮನ್‌ಪ್ರೀತ್ ಕೌರ್‌ ಆಟ ರಂಗೇರಿತು. ಈ ಜೋಡಿ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 196 ರನ್‌ ಕೂಡಿಸಿತು.

119 ಎಸೆತಗಳನ್ನು ಎದುರಿಸಿದ ಮಂದಾನ 2 ಸಿಕ್ಸರ್ ಮತ್ತು 13 ಬೌಂಡರಿ ಸಹಿತ 123ರನ್ ಸಿಡಿಸಿದರು.ಮಂದಾನ ಅವರಿಗೆ ಇದು 5ನೇ ಶತಕ.

ಮೊತ್ತೊಂದು ತುದಿಯಲ್ಲಿ ಉತ್ತಮವಾಗಿ ಬ್ಯಾಟ್‌ ಬೀಸಿದ ಕೌರ್‌ 107 ಎಸೆತಗಳಲ್ಲಿ 109 ರನ್ ಬಾರಿಸಿ ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕನೇ ಸಲ ಮೂರಂಕಿ ಮೊತ್ತ ಗಳಿಸಿದ ಸಾಧನೆ ಮಾಡಿದರು. ಅವರ ಇನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು.

ವಿಂಡೀಸ್‌ ಪರ ಅನಿಸಾ ಮೊಹಮ್ಮದ್ಎರಡು ವಿಕೆಟ್‌ ಗಳಿಸಿದರೆ, ಶಮಿಲಿಯಾ ಕಾನ್ನೆಲ್, ಹೀಲಿ ಮ್ಯಾಥ್ಯೂಸ್‌, ಶಕೇರಾ ಸೆಲ್ಮನ್, ಡಿಯಾಂಡ್ರಾ ದೊತ್ತಿನ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.