ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ವನಿತೆಯರ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಮೊದಲ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಸಿನಿ ತಾರೆಯರು ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಶುಭಕೋರಿದ್ದಾರೆ.
ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ರಿಷಬ್ ಶೆಟ್ಟಿ, ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಸ್ಟೋರಿಯ ಮೂಲಕ ಶುಭ ಹಾರೈಸಿದ್ದಾರೆ.
ನಟ ಸುನೀಲ್ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿ, ‘ಮಹಿಳಾ ಕ್ರಿಕೆಟ್ ತಂಡದ ಉತ್ಸಾಹ, ಧೈರ್ಯ, ಗೆಲುವಿನ ಇತಿಹಾಸ ಸೃಷ್ಟಿಗೆ ಕಾರಣವಾಯಿತು. ಕನಸು ಕಾಣುವ ಪ್ರತಿಯೊಬ್ಬ ಪುಟ್ಟ ಹುಡುಗಿಗೆ ಮತ್ತು ಅಲ್ಲಿರುವ ಭಾರತೀಯನಿಗೆ ಜೋರಾಗಿ ಹೇಳಿ ನಾವು ವಿಶ್ವ ಚಾಂಪಿಯನ್‌ಗಳು‘ ಎಂದಿದ್ದಾರೆ.
ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆ ತಿಳಿಸಿದ ನಟಿ ಪ್ರೀತಿ ಜಿಂಟಾ, ‘ನಾವು ವಿಶ್ವ ಚಾಂಪಿಯನ್‌ಗಳು. ತಮ್ಮ ಮೊದಲ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡಕ್ಕೆ ಅಭಿನಂದನೆಗಳು. ವಿಶ್ವಕಪ್ ಕನಸು ಕಂಡ ಪ್ರತಿಯೊಬ್ಬರಿಗೂ ಹಾಗೂ ಕ್ರಿಕೆಟ್ ಮೈದಾನದಲ್ಲಿ ಅಪಹಾಸ್ಯಕ್ಕೊಳಗಾದ ಪ್ರತಿಯೊಬ್ಬ ಹುಡುಗಿಗೂ ಈ ಗೆಲುವು ನಿಮಗಾಗಿ. ಈ ಸಂತಸದ ಕ್ಷಣಕ್ಕೆ ಕಾರಣವಾದ ಪ್ರತಿಯೊಬ್ಬ ಮಹಿಳೆಗೂ ಧನ್ಯವಾದಗಳು. ಈ ಅದ್ಭುತ ತಂಡದ ಬಗ್ಗೆ ತುಂಬಾ ಹೆಮ್ಮೆಯಿದೆ’ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ವಿಶ್ವ ವಿಜಯಿ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಕೋರಿದ ಮಲಯಾಳಂ ನಟ ಮಮ್ಮುಟಿ, ‘ನಮ್ಮ ಅದ್ಭುತ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ವಿಶ್ವಕಪ್ ಗೆಲುವ ಮೂಲಕ ನೀವು ಇತಿಹಾಸ ಸೃಷ್ಟಿಸಿರುವುದು ಭಾರತೀಯರಿಗೆ ಹೆಮ್ಮೆ ಕ್ಷಣವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.