
ಶುಭಮನ್ ಗಿಲ್
ಕೋಲ್ಕತ್ತ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಕುತ್ತಿಗೆ ಗಾಯದ ಚಿಕಿತ್ಸೆಗೆ ಒಳಗಾಗಿದ್ದ ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದಾಗ್ಯೂ, ನವೆಂಬರ್ 22ರಿಂದ (ಶನಿವಾರ) ಗುವಾಹಟಿಯಲ್ಲಿ ಪ್ರಾರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅವರ ಲಭ್ಯತೆ ಅನಿಶ್ಚಿತವಾಗಿದೆ ಎಂದು ‘ಇಎಸ್‌ಪಿಎನ್ ಕ್ರಿಕ್‌ಇನ್ಫೋ’ ವೆಬ್‌ಸೈಟ್ ವರದಿ ಮಾಡಿದೆ.
ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ನಡೆದ ಮೊದಲ ಪಂದ್ಯದ ಎರಡನೇ ದಿನದಾಟದಲ್ಲಿ (ಶನಿವಾರ) ಗಿಲ್ ಅವರು ಬ್ಯಾಟಿಂಗ್ ಮಾಡುವಾಗ ಕುತ್ತಿಗೆಯ ಸ್ನಾಯುಸೆಳೆತದ ನೋವು ಅನುಭವಿಸಿದ್ದರು. ಅದರಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ ಅವರು ವುಡ್‌ಲ್ಯಾಂಡ್ಸ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಗಿಲ್ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದಿದ್ದರು.
‘ಮಂಗಳವಾರ ಬೆಳಿಗ್ಗೆ ಕೋಲ್ಕತ್ತದಲ್ಲಿ ಟೀಂ ಇಂಡಿಯಾದ ತರಬೇತಿ ಅವಧಿ ನಿಗದಿಯಾಗಿದೆ. ಆದರೆ, ಗಿಲ್ ನೆಟ್ಸ್‌ನಲ್ಲಿ ಬೆವರು ಹರಿಸುವುದು ಅನುಮಾನ ಎನ್ನಲಾಗಿದೆ. ತಂಡವು ಬುಧವಾರ ಗುವಾಹಟಿಗೆ ಪ್ರಯಾಣ ಬೆಳೆಸಲಿದೆ. ಆದರೆ, ಕುತ್ತಿಗೆ ನೋವಿನಿಂದ ಚೇತರಿಸಿಕೊಳ್ಳುತ್ತಿರುವುದರಿಂದ ವಿಮಾನದಲ್ಲಿ ಪ್ರಯಾಣಿಸುವುದು ಬೇಡವೆಂದು ವೈದ್ಯರು ಸಲಹೆ ನೀಡಿರುವ ಕಾರಣಕ್ಕೆ ಗಿಲ್ ತಂಡದೊಂದಿಗೆ ಪ್ರಯಾಣಿಸುವ ಸಾಧ್ಯತೆ ಇಲ್ಲ’ ಎಂದು ಮೂಲಗಳು ತಿಳಿಸಿವೆ.
‘ಗಿಲ್ ಅವರು ಇನ್ನೂ ನಿಗಾದಲ್ಲಿದ್ದು, ವೈದ್ಯರ ತಂಡ ಶೀಘ್ರದಲ್ಲೇ ಮತ್ತೊಂದು ಸುತ್ತಿನ ತಪಾಸಣೆ ನಡೆಸಲಿದೆ’ ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ.
ಕೋಲ್ಕತ್ತ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ ಅನುಪಸ್ಥಿತಿಯಲ್ಲಿ ಭಾರತಕ್ಕೆ ಬ್ಯಾಟ್ಸ್‌ಮನ್ ಕೊರತೆ ಕಾಡಿತ್ತು. ಅಂತಿಮವಾಗಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 30 ರನ್ ಅಂತರದಿಂದ ಗೆಲುವು ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.