ADVERTISEMENT

AUS vs IND 3rd ODI: ಏಕದಿನ ಕ್ರಿಕೆಟ್‌ನಲ್ಲಿ ವೇಗದ 12,000 ರನ್ ಗಳಿಸಿದ ಕೊಹ್ಲಿ

ಸಚಿನ್ ತೆಂಡೂಲ್ಕರ್‌ರ 17 ವರ್ಷಗಳ ಹಿಂದಿನ ದಾಖಲೆ ಮುರಿದ ಕೊಹ್ಲಿ

ಏಜೆನ್ಸೀಸ್
Published 2 ಡಿಸೆಂಬರ್ 2020, 5:43 IST
Last Updated 2 ಡಿಸೆಂಬರ್ 2020, 5:43 IST
ಕ್ಯಾನಬೆರ‍್ರಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಖರಿ– ಎಎಫ್‌ಪಿ ಚಿತ್ರ
ಕ್ಯಾನಬೆರ‍್ರಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಖರಿ– ಎಎಫ್‌ಪಿ ಚಿತ್ರ   

ಕ್ಯಾನಬೆರ‍್ರಾ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 12,000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆನಿರ್ಮಿಸಿದ್ದಾರೆ.

‘ವಿರಾಟ್‌ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ 12,000 ರನ್ ಪೂರೈಸಿದ್ದಾರೆ. ಕೇವಲ 242 ಇನ್ನಿಂಗ್ಸ್‌ಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟ್ವೀಟ್ ಮಾಡಿದೆ.

ಆಸ್ಟ್ರೇಲಿಯಾದ ಕ್ಯಾನಬೆರ‍್ರಾದಲ್ಲಿ ಅತಿಥೇಯ ತಂಡದ ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಇಂದು (ಬುಧವಾರ) ಅವರು ಈ ಸಾಧನೆ ಮಾಡಿದರು.

ಈ ಸಾಧನೆಗೆ ಅವರು ಒಟ್ಟು 242 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಇದರೊಂದಿಗೆ 12,000 ರನ್‌ ಗಡಿ ದಾಟಿದ ಆರನೇ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಕುಮಾರ ಸಂಗಕ್ಕಾರ, ಸನತ್ ಜಯಸೂರ್ಯ, ಮಹೇಲ ಜಯವರ್ಧನೆ ಅವರು ಏಕದಿನ ಕ್ರಿಕೆಟ್‌ನಲ್ಲಿ 12,000 ರನ್ ಪೂರೈಸಿದ್ದಾರೆ. ಆದರೆ, ಕೊಹ್ಲಿ ಇವರೆಲ್ಲರಿಗಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 12,000 ರನ್ ಗಳಿಸಿದ್ದಾರೆ.

ಸಚಿನ್‌ರ ದಾಖಲೆ ಮುರಿದ ಕೊಹ್ಲಿ: ಈ ಸಾಧನೆಯೊಂದಿಗೆ ಕೊಹ್ಲಿ ಅವರು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ 17 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಸಚಿನ್ ಅವರು 2003ರಲ್ಲಿ ತಮ್ಮ 300ನೇ ಇನ್ನಿಂಗ್ಸ್‌ನಲ್ಲಿ 12,000 ರನ್ ಗಡಿ ದಾಟಿದ್ದರು.

ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.