ಸ್ಕಾಟ್ ಬೋಲ್ಯಾಂಡ್, ಸ್ಯಾಮ್ ಕಾನ್‌ಸ್ಟಸ್
(ಚಿತ್ರ ಕೃಪೆ: X/@cricketcomau)
ಮೆಲ್ಬರ್ನ್: ಪ್ರವಾಸಿ ಭಾರತ ವಿರುದ್ಧ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ.
19 ವರ್ಷದ ಯುವ ಬ್ಯಾಟರ್ ಸ್ಯಾಮ್ ಕಾನ್‌ಸ್ಟಸ್ ಚೊಚ್ಚಲ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ.
ಆ ಮೂಲಕ 70ಕ್ಕೂ ಹೆಚ್ಚು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಪರ ಪದಾರ್ಪಣೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಅವರಿಗೆ ನೇಥನ್ ಮೆಕ್‌ಸ್ವೀನ್ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಮೆಕ್‌ಸ್ವೀನಿ ಕ್ರಮವಾಗಿ 10,0,39,10*,9 ಮತ್ತು 4 ರನ್ ಗಳಿಸಿ ವೈಫಲ್ಯ ಅನುಭವಿಸಿದ್ದರು.
ಟ್ರಾವಿಸ್ ಹೆಡ್ ಸಹ ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಮೆಲ್ಬರ್ನ್ ಪಂದ್ಯಕ್ಕೆ ಲಭ್ಯರಿರಲಿದ್ದಾರೆ.
ಹಾಗೆಯೇ ಸ್ಕಾಟ್ ಬೋಲ್ಯಾಂಡ್ ಪುನರಾಗಮನ ಮಾಡಿಕೊಂಡಿದ್ದು, ಗಾಯಾಳು ಜೋಶ್ ಹ್ಯಾಜಲ್‌ವುಡ್ ಸ್ಥಾನವನ್ನು ತುಂಬಲಿದ್ದಾರೆ.
ಗಾಯಕ್ಕೆ ತುತ್ತಾಗಿರುವ ಹ್ಯಾಜಲ್‌ವುಡ್ ಟೂರ್ನಿಯಿಂದಲೇ ನಿರ್ಗಮಿಸಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ 1-1ರಲ್ಲಿ ಸಮಬಲ ಸಾಧಿಸಿದೆ. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 295 ರನ್ ಅಂತರದ ಗೆಲುವು ದಾಖಲಿಸಿದ್ದರೆ ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.
ಮೆಲ್ಬರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ (ಡಿ.26ರಿಂದ 30ರವರೆಗೆ) ಮತ್ತು ಕೊನೆಯ ಪಂದ್ಯ ಸಿಡ್ನಿಯಲ್ಲಿ (ಜ.3ರಿಂದ 7ರವರೆಗೆ) ನಡೆಯಲಿದೆ.
ಆಸ್ಟ್ರೇಲಿಯಾ ಆಡುವ ಹನ್ನೊಂದರ ಬಳಗ ಹೀಗಿದೆ:
ಉಸ್ಮಾನ್ ಖ್ವಾಜಾ, ಸ್ಯಾಮ್ ಕಾನ್‌ಸ್ಟಸ್, ಮಾರ್ನಸ್ ಲಾಬುಷೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯನ್ ಮತ್ತು ಸ್ಕಾಟ್ ಬೋಲ್ಯಾಂಡ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.