ADVERTISEMENT

ತಾವು ಎದುರಿಸಿದ ಮೊದಲ ಎಸೆತದಲ್ಲೇ ಬಚಾವ್ ಆದ ಕಿಂಗ್ ಕೊಹ್ಲಿ; ಔಟ್ Or ನಾಟೌಟ್?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2025, 2:51 IST
Last Updated 3 ಜನವರಿ 2025, 2:51 IST
<div class="paragraphs"><p>(ಚಿತ್ರ: X@cricketcomau, ಟ್ವಿಟರ್ ಸ್ಕ್ರೀನ್‌ಶಾಟ್)</p></div>

(ಚಿತ್ರ: X@cricketcomau, ಟ್ವಿಟರ್ ಸ್ಕ್ರೀನ್‌ಶಾಟ್)

   

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟರ್ ವಿರಾಟ್ ಕೊಹ್ಲಿ, ತಾವು ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್ ಆಗುವ ಅಪಾಯದಿಂದ ಪಾರಾಗಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿತ್ತು. 7.4 ಓವರ್‌ಗಳಲ್ಲೇ 17 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಯಶಸ್ವಿ ಜೈಸ್ವಾಲ್ (10) ಹಾಗೂ ಕೆ.ಎಲ್. ರಾಹುಲ್ (4) ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ADVERTISEMENT

ಈ ಸಂದರ್ಭದಲ್ಲಿ ಕ್ರೀಸಿಗಿಳಿದ ಕೊಹ್ಲಿಗೆ ಮೊದಲ ಎಸೆತದಲ್ಲೇ ಕಠಿಣ ಸವಾಲು ಎದುರಾಗಿತ್ತು. ಆಸೀಸ್ ವೇಗಿ ಸ್ಕಾಟ್ ಬೋಲ್ಯಾಂಡ್ ಅವರ ಎಸೆತವು ಬ್ಯಾಟ್‌ಗೆ ಸವರಿ ಸ್ಲಿ‌ಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಅವರತ್ತ ಸಾಗಿತ್ತು.

ಈ ವೇಳೆ ಸ್ಮಿತ್ ಡೈವ್ ಹೊಡೆದು ಹಿಡಿಯಲು ಯತ್ನಿಸಿದ್ದರು. ಆಗ ಸ್ಮಿತ್ ಕೈಯಿಂದ ಮೇಲಕ್ಕೆ ಚಿಮ್ಮಿದ ಚೆಂಡನ್ನು ಅಲ್ಲೇ ಸಮೀಪದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಾರ್ನಸ್ ಲಾಬುಷೇನ್ ಹಿಡಿದು ಕ್ಯಾಚ್ ಪೂರ್ಣಗೊಳಿಸಲು ಯತ್ನಿಸಿದರು. ಈ ಕ್ಷಣದಲ್ಲಿ ಆಸೀಸ್ ಆಟಗಾರರು ಸಂಭ್ರಮದಲ್ಲಿ ತೇಲಾಡಿದರು.

ಆದರೆ ರಿಪ್ಲೇ ಪರಿಶೀಲಿಸಿದ ಮೂರನೇ ಅಂಪೈರ್, ಚೆಂಡು ನೆಲಕ್ಕೆ ತಗಲಿರುವುದನ್ನು ಖಚಿತಪಡಿಸಿ ಕೊಹ್ಲಿ ನಾಟೌಟ್ ಎಂದು ತೀರ್ಪು ನೀಡಿದರು. ಇದರಿಂದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್ ಆಗುವ ಅಪಾಯದಿಂದ ಕೊಹ್ಲಿ ಪಾರಾದರು.

ಈ ತೀರ್ಪು ಪ್ರಸ್ತುತ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಮತ್ತೊಂದು ವಿವಾದವನ್ನು ಹುಟ್ಟು ಹಾಕಿದೆ.

ಬಳಿಕ ಭೋಜನ ವಿರಾಮದ ವೇಳೆಯಲ್ಲಿ ಸ್ಮೀವ್ ಸ್ಮಿತ್ ಅವರನ್ನು ಈ ಕುರಿತು ಕೇಳಿದಾಗ, 'ಹೌದು, ಶೇ 100ರಷ್ಟು ಖಚಿತತೆಯಿದೆ. ಚೆಂಡಿನ ಅಡಿಯಲ್ಲಿ ನನ್ನ ಕೈ ಇತ್ತು' ಎಂದು ಪ್ರತಿಕ್ರಿಯಿಸಿದ್ದಾರೆ.

ಆದರೆ ಕೊಹ್ಲಿ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಊಟದ ವಿರಾಮದ ಬಳಿಕ ಸ್ಕಾಟ್ ಬೋಲ್ಯಾಂಡ್ ಅವರ ದಾಳಿಯಲ್ಲೇ ಔಟ್ ಆಗಿ ನಿರ್ಗಮಿಸಿದರು. 69 ಎಸೆತಗಳಲ್ಲಿ 17 ರನ್ ಗಳಿಸಿದ ಕೊಹ್ಲಿ ನಿರಾಸೆ ಮೂಡಿಸಿದರು. ಮಗದೊಮ್ಮೆ ಆಫ್ ಸ್ಟಂಪ್ ಆಚೆಗಿನ ಎಸೆತದಲ್ಲೇ ಸ್ಲಿಪ್‌ನಲ್ಲಿ ನಿಂತಿದ್ದ ಫೀಲ್ಡರ್‌ಗೆ ಕ್ಯಾಚಿತ್ತು ಕೊಹ್ಲಿ ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.