ವಾಷಿಂಗ್ಟನ್ ಸುಂದರ್ ಅವರ ಔಟ್ ಪರಿಶೀಲನೆ
ಚಿತ್ರಕೃಪೆ: X / @harsh03443
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ 185 ರನ್ ಗಳಿಸಿ ಆಲೌಟ್ ಆಗಿದೆ.
ಟೀಂ ಇಂಡಿಯಾ ಬ್ಯಾಟರ್‌ಗಳು, ಆತಿಥೇಯರ ಕರಾರುವಾಕ್ ದಾಳಿ ಎದುರು ದಿಟ್ಟ ಆಟವಾಡುವಲ್ಲಿ ವಿಫಲವಾದರು. ಏತನ್ಮಧ್ಯೆ, ವಾಷಿಂಗ್ಟನ್ ಸುಂದರ್ ಅವರ ಔಟ್ ತೀರ್ಪಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
30 ಎಸೆತಗಳಲ್ಲಿ 14 ರನ್ ಗಳಿಸಿದ್ದ ಸುಂದರ್, ಎದುರಾಳಿ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ವಿಕೆಟ್ ಒಪ್ಪಿಸಿದರು.
ಇನಿಂಗ್ಸ್‌ನ 66ನೇ ಓವರ್‌ನ ಕೊನೇ ಎಸೆತವನ್ನು ಅವರು ಪುಲ್ ಮಾಡಲು ಯತ್ನಿಸಿದರು. ಚೆಂಡು ಬ್ಯಾಟ್‌ನ ಹತ್ತಿರದಲ್ಲೇ ಸಾಗಿ, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕೈಸೇರಿತು. ಆತಿಥೇಯ ತಂಡದ ಆಟಗಾರರು ಕ್ಯಾಚ್ ಔಟ್‌ಗಾಗಿ ಮನವಿ ಮಾಡಿದರು. ಆದರೆ, ಅಂಪೈರ್ ನಿರಾಕರಿಸಿದರು.
ಚೆಂಡು ಸುಂದರ್ ಅವರ ಗ್ಲೌಗೆ ತಾಗಿದೆ ಎಂಬ ವಿಶ್ವಾಸದಲ್ಲಿದ್ದ ಕ್ಯಾರಿ, ಡಿಆರ್‌ಎಸ್ ತೆಗೆದುಕೊಳ್ಳುವಂತೆ ಕಮಿನ್ಸ್ ಅವರ ಮನ ಒಲಿಸಿದರು.
ಚೆಂಡು ಬ್ಯಾಟ್‌ಗೆ ತೀರಾ ಹತ್ತಿರದಲ್ಲಿ ಸಾಗಿದ್ದರೂ, ಬ್ಯಾಟ್ ಅಥವಾ ಗ್ಲೌಗೆ ತಾಗದೇ ಇರುವಂತೆ ಸ್ನಿಕೋ ಮೀಟರ್‌ನಲ್ಲಿಯೂ ಕಾಣುತ್ತದೆ. ಆದಾಗ್ಯೂ, ಅಂಪೈರ್ ತಮ್ಮ ನಿರ್ಧಾರ ಬದಲಿಸಿ ಔಟ್ ನೀಡಿದ್ದಾರೆ.
ಈ ಬಗ್ಗೆ ಅಂಪೈರ್ ಜೊತೆ ಚರ್ಚಿಸಿದ ನಾಯಕ ಜಸ್‌ಪ್ರೀತ್ ಬೂಮ್ರಾ, ಅಸಮಾಧಾನ ಹೊರಹಾಕಿದರು.
ಇದರ ಬಗ್ಗೆ ಸಾಮಾಜಿಕ ಮಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
ಔಟ್ ಅಲ್ಲ ಎಂದು ಅಭಿಪ್ರಾಯಪಟ್ಟಿರುವ ನೆಟ್ಟಿಗರು, ತೀರ್ಪನ್ನು ಟೀಕಿಸಿದ್ದಾರೆ. ಕ್ರಿಕೆಟ್ ಪಂಡಿತರೂ, ತೀರ್ಪಿನ ವಿರುದ್ಧ ಮಾತನಾಡಿದ್ದಾರೆ.
ಮೆಲ್ಬರ್ನ್ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರೂ ಇದೇ ರೀತಿ ಔಟಾಗಿದ್ದರು. ಅದೂ ವಿವಾದವಾಗಿತ್ತು. ಆಗಲೂ ಅಂಪೈರ್ ಜೋಲ್ ವಿಲ್ಸನ್ ಫೀಲ್ಡ್‌ನಲ್ಲಿದ್ದರು ಎಂಬುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.