ಗೌತಮ್ ಗಂಭೀರ್
ಸಿಡ್ನಿ: ಡ್ರೆಸ್ಸಿಂಗ್ ಕೋಣೆಯಲ್ಲಿ ನಡೆಯುವ ಚರ್ಚೆಗಳು ಸಾರ್ವಜನಿಕವಾಗಿ ಹಂಚಿಕೆಯಾಗಬಾರದು ಎಂದು ಪ್ರತಿಪಾದಿಸಿರುವ ಭಾರತ ಕ್ರಿಕೆಟ್ ತಂಡದ ಮುಖ್ಯಕೋಚ್ ಗೌತಮ್ ಗಂಭೀರ್, ಆಟಗಾರರೊಂದಿಗೆ 'ಪ್ರಾಮಾಣಿಕ' ಸಂಭಾಷಣೆ ನಡೆಸಿರುವುದಾಗಿ ಗುರುವಾರ ಹೇಳಿದ್ದಾರೆ.
ತಂಡದ ಡ್ರೆಸ್ಸಿಂಗ್ ಕೋಣೆಯ ವಾತಾವರಣ ಹದಗೆಟ್ಟಿದೆ ಎಂಬ ವರದಿಗಳ ಕುರಿತು, 'ಅವೆಲ್ಲ ಸತ್ಯವಲ್ಲ' ಎಂದಿದ್ದಾರೆ.
ಆಸ್ಟ್ರೇಲಿಯಾ ಎದುರಿನ ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಆಟಗಾರರು ಮತ್ತು ಕೋಚ್ ನಡುವಣ ಚರ್ಚೆಯು ಡ್ರೆಸ್ಸಿಂಗ್ ಕೋಣೆಯಲ್ಲಿಯೇ ಉಳಿಯಬೇಕು. ಡ್ರೆಸ್ಸಿಂಗ್ ಕೋಣೆಯಲ್ಲಿ ಕಠೋರ ಪದಗಳನ್ನು ಬಳಸಲಾಗಿದೆ ಎಂಬುದೆಲ್ಲ ವರದಿಗಳಷ್ಟೇ. ನಿಜವಲ್ಲ' ಎಂದಿದ್ದಾರೆ.
'ಡ್ರೆಸ್ಸಿಂಗ್ ಕೋಣೆಯಲ್ಲಿ ಪ್ರಮಾಣಿಕರು ಇರುವವರೆಗೆ ಭಾರತೀಯ ಕ್ರಿಕೆಟ್ ಸುರಕ್ಷಿತ ಕೈಗಳಲ್ಲಿ ಉಳಿಯಲಿದೆ. ನಿಮ್ಮನ್ನು (ಆಟಗಾರರನ್ನು) ಡ್ರೆಸ್ಸಿಂಗ್ ಕೋಣೆಯಲ್ಲಿ ಉಳಿಯುವುಂತೆ ಮಾಡಲು ಉತ್ತಮ ಪ್ರದರ್ಶನದಿಂದಷ್ಟೇ ಸಾಧ್ಯ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಚರ್ಚೆಯ ವೇಳೆ ಪ್ರಾಮಾಣಿಕ ಮಾತುಗಳನ್ನು ಹೇಳಲಾಗಿದೆ. ಪ್ರಾಮಾಣಿಕತೆ ಬಹಳ ಮುಖ್ಯ' ಎಂದಿರುವ ಗಂಭೀರ್, ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದಕ್ಕೆ ಸಂಬಂಧಿಸಿದ ಮಾತುಗಳನ್ನು ಬಿಟ್ಟರೆ, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳಿದ್ದಾರೆ.
'ಯಾವೆಲ್ಲ ವಿಭಾಗಗಳಲ್ಲಿ ಕೆಲಸ ಮಾಡಬೇಕು ಎಂಬುದು ಪ್ರತಿಯೊಬ್ಬ ಆಟಗಾರರನಿಗೆ ಗೊತ್ತಿದೆ. ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಬಗ್ಗೆಯಷ್ಟೇ ಅವರೊಂದಿಗೆ ಮಾತನಾಡಿದ್ದೇವೆ' ಎಂದು ಸ್ಪಷ್ಟಪಡಿಸಿದ್ದಾರೆ.
ಬೆನ್ನುನೋವಿನಿಂದ ಬಳಲುತ್ತಿರುವ ಮಧ್ಯಮ ವೇಗಿ ಆಕಾಶ್ ದೀಪ್ ಅವರು ಹೊಸ ವರ್ಷದ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದಿರುವ ಕೋಚ್, ಬದಲಿ ಆಟಗಾರನನ್ನು ಹೆಸರಿಸಿಲ್ಲ.
ಆಸಿಸ್ ಎದುರಿನ ಬಾರ್ಡರ್–ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ 5ನೇ ಹಾಗೂ ಅಂತಿಮ ಪಂದ್ಯವು ಸಿಡ್ನಿಯಲ್ಲಿ ನಾಳೆಯಿಂದ (ಶುಕ್ರವಾರ) ಆರಂಭವಾಗಲಿದೆ. ಸರಣಿಯಲ್ಲಿ ಆತಿಥೇಯರು 2–1 ಅಂತರದ ಮುನ್ನಡೆ ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.