ADVERTISEMENT

AUS vs IND Test: ನಿವೃತ್ತಿ ವದಂತಿ ಕುರಿತು ರೋಹಿತ್ ಶರ್ಮಾ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 3:59 IST
Last Updated 4 ಜನವರಿ 2025, 3:59 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ಸಿಡ್ನಿ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರು, ಆಸ್ಟ್ರೇಲಿಯಾ ಎದುರಿನ ಬಾರ್ಡರ್‌–ಗವಾಸ್ಕರ್‌ ಟೆಸ್ಟ್ ಸರಣಿಯ 5ನೇ ಹಾಗೂ ಅಂತಿಮ ಪಂದ್ಯದಿಂದ ಹೊರಗುಳಿದಿದ್ದಾರೆ.

ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ವಿಫಲರಾಗುತ್ತಿರುವ ಅವರು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ಅಂತಿಮ ಪಂದ್ಯದಲ್ಲಿ ತಂಡ ಮುನ್ನಡೆಸುತ್ತಿರುವ ಜಸ್‌ಪ್ರೀತ್ ಬೂಮ್ರಾ ಹೇಳಿದ್ದಾರೆ.

ಆದಾಗ್ಯೂ, ರೋಹಿತ್‌ ನಿವೃತ್ತಿ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. 'ಸರಣಿಯಲ್ಲಿ ಎರಡು ಸೋಲು ಎದುರಾಗುತ್ತಿದ್ದಂತೆ, ರೋಹಿತ್‌ ಅವರನ್ನು ಹೊರಗಿಡಲಾಗಿದೆ. ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ' ಎಂದೆಲ್ಲ ಹೇಳಲಾಗುತ್ತಿದೆ.

ADVERTISEMENT

'ಸ್ಟಾರ್‌ಸ್ಪೋರ್ಟ್ಸ್‌' ಜೊತೆ ಮಾತನಾಡಿರುವ ರೋಹಿತ್‌, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ತಾವು ಎಲ್ಲಿಗೂ ಹೋಗಿಲ್ಲ. ಈ ಪಂದ್ಯದಿಂದ ಹೊರಗೆ ಉಳಿದಿದ್ದೇನೆ ಅಷ್ಟೇ ಎಂದಿದ್ದಾರೆ.

'ನಾನು ನಿವೃತ್ತಿ ಹೊಂದುತ್ತಿಲ್ಲ. ಈ ಪಂದ್ಯದಿಂದ ಕೆಳಗಿಳಿದಿದ್ದೇನೆ ಎಂದಷ್ಟೇ ಹೇಳುತ್ತೇನೆ. ಕೋಚ್‌ ಹಾಗೂ ಆಯ್ಕೆದಾರರೊಂದಿಗೆ ನಾನು ನಡೆಸಿದ ಮಾತುಕತೆ ತುಂಬಾ ಸರಳವಾಗಿತ್ತು' ಎಂದಿರುವ ಅವರು, 'ನಾನು ಲಯದಲ್ಲಿಲ್ಲ. ರನ್‌ ಗಳಿಸಲು ಸಾಧ್ಯವಾಗುತ್ತಿಲ್ಲ. ಇದು ತುಂಬಾ ಮುಖ್ಯವಾದ ಪಂದ್ಯವಾಗಿರುವುದರಿಂದ ಲಯದಲ್ಲಿರುವ ಆಟಗಾರನ ಅಗತ್ಯವಿತ್ತು. ನಮ್ಮ ತಂಡದ ಬ್ಯಾಟಿಂಗ್‌ ಕೂಡ ಅಷ್ಟೇನು ಉತ್ತಮವಾಗಿಲ್ಲ. ಹಾಗಾಗಿ, ಲಯದಲ್ಲಿಲ್ಲದ ಹೆಚ್ಚು ಆಟಗಾರರೊಂದಿಗೆ ಮುನ್ನಡೆಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಮುಂದುವರಿದು, 'ಇದು ತುಂಬಾ ಸರಳವಾದ ವಿಚಾರ. ನಾನು ಎಲ್ಲಿಗೂ ಹೋಗುವುದಿಲ್ಲ. ಹಾಗಾಗಿಯೇ, ನನ್ನ ತಲೆಯಲ್ಲಿದ್ದ ವಿಚಾರವನ್ನು ಕೋಚ್‌ ಮತ್ತು ಆಯ್ಕೆದಾರರೊಂದಿಗೆ ಹಂಚಿಕೊಳ್ಳಲು ಬಯಸಿದ್ದೆ. ನನ್ನ ನಿರ್ಧಾರವನ್ನು ಅವರು ಒಪ್ಪಿದರು. ತುಂಬಾ ವರ್ಷಗಳಿಂದ ಆಡುತ್ತಿರುವ ನಿಮಗೆ, ಯಾವ ನಿರ್ಧಾರ ಕೈಗೊಳ್ಳುತ್ತಿದ್ದೀರಿ ಎಂಬುದು ಗೊತ್ತಿದೆ ಎಂದು ಹೇಳಿದರು. ಹಾಗಾಗಿ, ಈ ನಿರ್ಧಾರ ಕೈಗೊಳ್ಳುವುದು ಸ್ವಲ್ಪ ಕಷ್ಟವಾಯಿತು. ಆದರೆ, ಎಲ್ಲವೂ ನಮ್ಮ ಮುಂದಿದ್ದಾಗ, ಈ ನಿರ್ಧಾರ ಸೂಕ್ತವಾಗಿದೆ ಎನಿಸಿತು. ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ' ಎಂದು ವಿವರಿಸಿದ್ದಾರೆ.

ಆ ಮೂಲಕ, ಸಿಡ್ನಿ ಟೆಸ್ಟ್‌ನಿಂದ ಹೊರಗುಳಿವ ನಿರ್ಧಾರ ತಮ್ಮದೇ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ರೋಹಿತ್‌, ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳ 5 ಇನಿಂಗ್ಸ್‌ಗಳಿಂದ ಕೇವಲ 31 ರನ್‌ ಗಳಿಸಿದ್ದಾರೆ. 

ಸಿಡ್ನಿಯಲ್ಲಿ ಶುಕ್ರವಾರ ಆರಂಭವಾದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ 185 ರನ್‌ಗಳಿಗೆ ಆಲೌಟ್‌ ಆಗಿದೆ. ಇದಕ್ಕುತ್ತವಾಗಿ ಇನಿಂಗ್ಸ್‌ ಆರಂಭಿಸಿರುವ ಆತಿಥೇಯರು 42 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 151 ರನ್ ಗಳಿಸಿದ್ದಾರೆ.

‌ರೋಹಿತ್‌ ಶರ್ಮಾ ಬದಲಿಗೆ ಶುಭಮನ್‌ ಗಿಲ್‌ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಈ ಪಂದ್ಯವು ಉಭಯ ತಂಡಗಳ ಪಾಲಿಗೆ ಮಹತ್ವದ್ದಾಗಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪ್ರವೇಶದ ಹೋರಾಟದಲ್ಲಿ ಉಳಿಯಬೇಕಾದರೆ ಭಾರತ ಇಲ್ಲಿ ಗೆಲ್ಲಲೇಬೇಕಿದೆ. ಹಿಂದಿನ ನಾಲ್ಕು ಬಿಜಿಟಿ ಸರಣಿಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿರುವ ಆಸ್ಟ್ರೇಲಿಯಾ, ಈ ಬಾರಿ 2–1 ಅಂತರದ ಮುನ್ನಡೆ ಸಾಧಿಸಿದೆ. ಹೀಗಾಗಿ, ಟ್ರೋಫಿ ಜಯಿಸಲು ಡ್ರಾ ಅಥವಾ ಗೆಲುವು ಗಳಿಸುವ ಲೆಕ್ಕಾಚಾರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.