ಹೈದರಾಬಾದ್: ಕ್ಯಾಮರೂನ್ ಗ್ರೀನ್ ಹಾಗೂ ಟಿಮ್ ಡೇವಿಡ್ ಬಿರುಸಿನ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ನಡೆಯುತ್ತಿರುವ ಅಂತಿಮ ಟ್ವೆಂಟಿ ಪಂದ್ಯದಲ್ಲಿ ಏಳು ವಿಕೆಟ್ ನಷ್ಟಕ್ಕೆ 186 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಈ ಮೂಲಕ ಸರಣಿ ಗೆಲ್ಲಲು ಭಾರತಕ್ಕೆ 187 ರನ್‌ಗಳ ಅಗತ್ಯವಿದೆ.
ಗ್ರೀನ್ 19 ಮತ್ತು ಡೇವಿಡ್ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಅಬ್ಬರಿಸಿದರು.
ಆರಂಭಿಕನಾಗಿ ಕ್ರೀಸಿಗಿಳಿದ ಗ್ರೀನ್, ಕೇವಲ 21 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿಂದ 52 ರನ್ ಗಳಿಸಿದರು.
ಅತ್ತ ಕೊನೆಯ ಹಂತದಲ್ಲಿ ಸ್ಪೋಟಕ ಆಟವಾಡಿದ ಡೇವಿಡ್ 54 ರನ್ ಗಳಿಸಿದರು. 27 ಎಸೆತಗಳನ್ನು ಎದುರಿಸಿದ ಡೇವಿಡ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿಗಳು ಸೇರಿದ್ದವು.
ಡ್ಯಾನಿಯಲ್ ಸ್ಯಾಮ್ಸ್ ಅಜೇಯ 28 ಹಾಗೂ ಜೋಶ್ ಇಂಗ್ಲಿಸ್ 24 ರನ್ ಗಳಿಸಿ ಮಿಂಚಿದರು. ಇನ್ನುಳಿದಂತೆ ನಾಯಕ ಆ್ಯರನ್ ಫಿಂಚ್ 7, ಸ್ಟೀವ್ ಸ್ಮಿತ್ 9, ಗ್ಲೆನ್ ಮ್ಯಾಕ್ಸ್‌ವೆಲ್ 6 ಹಾಗೂ ಮ್ಯಾಥ್ಯೂ ವೇಡ್ 1 ರನ್ ಗಳಿಸಿ ನಿರಾಸೆ ಮೂಡಿಸಿದರು.
ಭಾರತದ ಪರ ಅಕ್ಷರ್ ಪಟೇಲ್ ಮೂರು ವಿಕೆಟ್ ಕಬಳಿಸಿದರೆ ಭುವನೇಶ್ವರ್ ಕುಮಾರ್ ಹಾಗೂ ಜಸ್‌ಪ್ರೀತ್ ಬೂಮ್ರಾ ದುಬಾರಿಯೆನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.