ADVERTISEMENT

IND vs AUS: ಸ್ಮಿತ್ ಶತಕ; ಲಾಬುಷೇನ್ 91; ಆಸೀಸ್ 338ಕ್ಕೆ ಆಲೌಟ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 7:56 IST
Last Updated 8 ಜನವರಿ 2021, 7:56 IST
ಸ್ಟೀವನ್ ಸ್ಮಿತ್ ಶತಕ ಸಾಧನೆ
ಸ್ಟೀವನ್ ಸ್ಮಿತ್ ಶತಕ ಸಾಧನೆ   

ಸಿಡ್ನಿ: ಭಾರತ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸಾಗುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ಅವರ ಅಮೋಘ ಶತಕದ (131) ಹೊರತಾಗಿಯೂ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಮೊತ್ತವನ್ನು 338 ರನ್ ಗಳಿಗೆ ಸೀಮಿತಗೊಳಿಸುವಲ್ಲಿ ಭಾರತ ಯಶಸ್ವಿಯಾಯಿತು.

ಸ್ಟೀವನ್ ಸ್ಮಿತ್ ಹಾಗೂ ಮಾರ್ನಸ್ ಲಾಬುಷೇನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತವನ್ನು ಕಾಡಿದರು. ಸ್ಮಿತ್ ಆಕರ್ಷಕ ಶತಕ ಸಾಧನೆ ಮಾಡಿದರೆ ಲಾಬುಷೇನ್ ಕೇವಲ 9 ರನ್ ಅಂತರದಿಂದ ಶತಕ ವಂಚಿತರಾದರು.

166ಕ್ಕೆ 2 ಎಂಬ ಸ್ಕೋರ್‌ನಿಂದ ಎರಡನೇ ದಿನದಾಟ ಮುಂದುವರಿಸಿದ ಆಸೀಸ್‌ಗೆ ಮಾರ್ನಸ್ ಲಾಬುಷೇನ್ ಹಾಗೂ ಸ್ಟೀವನ್ ಸ್ಮಿತ್ ನೆರವಾದರು. ಇವರಿಬ್ಬರು ತೃತೀಯ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದರು.

ADVERTISEMENT

ಈ ನಡುವೆ ಶತಕದ ಅಂಚಿನಲ್ಲಿ ಲಾಬುಷೇನ್ ಎಡವಿ ಬಿದ್ದರು. 196 ಎಸೆತಗಳನ್ನು ಎದುರಿಸಿದ ಲಾಬುಷೇನ್ 11 ಬೌಂಡರಿಗಳ ನೆರವಿನಿಂದ 91 ರನ್ ಗಳಿಸಿದರು. ಈ ವಿಕೆಟ್ ರವೀಂದ್ರ ಜಡೇಜ ಪಾಲಾಯಿತು.

ಬಳಿಕ ಕ್ರೀಸಿಗಿಳಿದ ಮ್ಯಾಥ್ಯೂ ವೇಡ್ (13) ಅವರನ್ನು ಔಟ್ ಮಾಡಿದ ಜಡೇಜ ಪರಿಣಾಮಕಾರಿ ಎನಿಸಿಕೊಂಡರು. ಇನ್ನೊಂದೆಡೆ ದಿಟ್ಟ ಹೋರಾಟ ಮುಂದುವರಿಸಿರುವ ಸ್ಮಿತ್ ಆಕರ್ಷಕ ಅರ್ಧಶತಕ ಬಾರಿಸಿದರು.

ಈ ಮಧ್ಯೆ ಭೋಜನ ವಿರಾಮಕ್ಕೆ ಕೆಲವೇ ಕ್ಷಣಗಳಿರುವಾಗ ಕ್ಯಾಮರಾನ್ ಗ್ರೀನ್ (0) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ಜಸ್‌ಪ್ರೀತ್ ಬೂಮ್ರಾ, ಆಸೀಸ್‌ಗೆ ಮಗದೊಂದು ಆಘಾತ ನೀಡಿದರು. ಊಟದ ವಿರಾಮದ ಹೊತ್ತಿಗೆ ಆಸೀಸ್ ಐದು ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತ್ತು.

ಭೋಜನ ವಿರಾಮದ ಬಳಿಕವೂ ವಿಕೆಟ್‌ನ ಒಂದು ತುದಿಯಿಂದ ನೆಲಕಚ್ಚಿ ನಿಂತ ಸ್ಮಿತ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಅಲ್ಲದೆ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಎಂಟನೇ ಶತಕ ಸಾಧನೆ ಮಾಡಿದರು.

ಅತ್ತ ರವೀಂದ್ರ ಜಡೇಜ ಕೈಚಳಕದ ನೆರವಿನಿಂದ ಆತಿಥೇಯರಿಗೆ ಕಡಿವಾಣ ಹಾಕುವಲ್ಲಿ ಭಾರತ ಯಶಸ್ವಿಯಾಯಿತು. ನಾಯಕ ಟಿಮ್ ಪೇನ್ (1), ಪ್ಯಾಟ್ ಕಮಿನ್ಸ್ (0), ನಥನ್ ಲಿಯನ್ (0) ಹೆಚ್ಚು ಹೊತ್ತು ನಿಲ್ಲಲಿಲ್ಲ.

ಅಂತಿಮವಾಗಿ ಸ್ಮಿತ್ ರನೌಟ್ ಆಗುವುದರೊಂದಿಗೆ ಆಸೀಸ್ 105.4 ಓವರ್‌ಗಳಲ್ಲಿ 338 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 226 ಎಸೆತಗಳನ್ನು ಎದುರಿಸಿದ ಸ್ಮಿತ್ 16 ಬೌಂಡರಿಗಳ ನೆರವಿನಿಂದ 131 ರನ್ ಗಳಿಸಿದರು. ಇನ್ನುಳಿದಂತೆ ಮಿಚೆಲ್ ಸ್ಟಾರ್ಕ್ 24 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರೆ ಜೋಶ್ ಹ್ಯಾಜಲ್‌ವುಡ್ (1*) ಅಜೇಯರಾಗುಳಿದರು.

ಮಳೆ ಬಾಧಿತ ಮೊದಲ ದಿನದಾಟದಲ್ಲಿ ಪದಾರ್ಪಣಾ ಆಟಗಾರ ವಿಲ್ ಪುಕೊವಸ್ಕಿ (62) ಆಕರ್ಷಕ ಅರ್ಧಶತಕ ಸಾಧನೆ ಮಾಡಿದ್ದರು.

ಭಾರತದ ಪರ ನಾಲ್ಕು ವಿಕೆಟ್ ಕಬಳಿಸಿದ ರವೀಂದ್ರ ಜಡೇಜ ಮಿಂಚಿದರು. ಜಸ್‌ಪ್ರೀತ್ ಬೂಮ್ರಾ ಹಾಗೂ ಪದಾರ್ಪಣಾ ವೇಗಿ ನವದೀಪ್ ಸೈನಿ ತಲಾ ಎರಡು ವಿಕೆಟ್ ಹಂಚಿಕೊಂಡರು. ಇನ್ನೊಂದು ವಿಕೆಟ್ ಮೊಹಮ್ಮದ್ ಸಿರಾಜ್ ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.