ADVERTISEMENT

IND vs ENG 2ನೇ ಏಕದಿನ ಪಂದ್ಯ: ಕೊಹ್ಲಿ ಕಣಕ್ಕೆ, ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2022, 12:15 IST
Last Updated 14 ಜುಲೈ 2022, 12:15 IST
ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಹಾಗೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ (ಚಿತ್ರ ಕೃಪೆ: @BCCI)
ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಹಾಗೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ (ಚಿತ್ರ ಕೃಪೆ: @BCCI)   

ಲಂಡನ್‌: ಆತಿಥೇಯ ಇಂಗ್ಲೆಂಡ್‌ ತಂಡದ ವಿರುದ್ಧ ಇಲ್ಲಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್‌ ಅಂತರದ ಅಮೋಘ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಭಾರತದವೇಗಿ ಜಸ್‌ಪ್ರೀತ್‌ ಬೂಮ್ರಾ ತಮ್ಮ ವೃತ್ತಿ ಶ್ರೇಷ್ಠ ಬೌಲಿಂಗ್‌(19 ರನ್‌ಗೆ 6 ವಿಕೆಟ್‌) ಪ್ರದರ್ಶನ ನೀಡಿದ್ದರು. ಅವರಿಗೆ ಅನುಭವಿ ವೇಗಿ ಮೊಹಮ್ಮದ್‌ ಶಮಿ (31 ರನ್‌ಗೆ 3 ವಿಕೆಟ್‌) ಸಾಥ್‌ ಕೊಟ್ಟಿದ್ದರು. ಹೀಗಾಗಿಆಂಗ್ಲ ತಂಡ ಕೇವಲ 110 ರನ್‌ಗಳಿಗೆ ಸರ್ವಪತನ ಕಂಡಿತ್ತು.

ಈ ಗುರಿ ಎದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ್ದ ಭಾರತದ ಆರಂಭಿಕ ಜೋಡಿ, ವಿಕೆಟ್‌ ಕಳೆದುಕೊಳ್ಳದೆ ಕೇವಲ 18.4 ಓವರ್‌ಗಳಲ್ಲೇ ಗೆಲುವು ತಂದುಕೊಟ್ಟಿತ್ತು. ಬೀಸಾಟವಾಡಿದ್ದ ನಾಯಕ ರೋಹಿತ್‌ ಶರ್ಮಾ58 ಎಸೆತಗಳಲ್ಲಿ 76 ರನ್‌ ಸಿಡಿಸಿದರೆ, ರಕ್ಷಣಾತ್ಮಕವಾಗಿ ಆಡಿದ ಶಿಖರ್‌ ಧವನ್‌ 54 ಎಸೆತಗಳಲ್ಲಿ 31 ರನ್‌ ಗಳಿಸಿ ಸುಲಭ ಜಯ ತಂದುಕೊಟ್ಟಿದ್ದರು.

ADVERTISEMENT

ಈ ಪಂದ್ಯವನ್ನೂ ಗೆದ್ದು ಸರಣಿ ಜಯ ಸಾಧಿಸುವುದು ಟೀಂ ಇಂಡಿಯಾದ ಲೆಕ್ಕಾಚಾರ. ಆದರೆ, ರೋಹಿತ್ ಪಡೆಗೆ ಸೋಲುಣಿಸಿ ಸರಣಿ ಜಯದ ಆಸೆ ಜೀವಂತವಾಗಿರಿಸಿಕೊಳ್ಳುವುದು ಜೋಸ್‌ ಬಟ್ಲರ್‌ ಪಡೆಯ ಉದ್ದೇಶವಾಗಿದೆ.

ಹನ್ನೊಂದರ ಬಳಗ
ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್‌ ಕೊಹ್ಲಿ ವಾಪಸ್ ಆಗಿದ್ದು, ಶ್ರೇಯಸ್‌ ಅಯ್ಯರ್‌ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್‌ ತಂಡ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದಿದೆ.

ಭಾರತ: ರೋಹಿತ್‌ ಶರ್ಮಾ (ನಾಯಕ), ಶಿಖರ್‌ ದವನ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮದ್‌ ಶಮಿ, ಜಸ್ಪ್ರಿತ್‌ ಬೂಮ್ರಾ, ಯುಜುವೇಂದ್ರ ಚಹಾಲ್‌, ಪ್ರಸಿದ್ಧ ಕೃಷ್ಣ

ಇಂಗ್ಲೆಂಡ್: ಜೇಸನ್‌ ರಾಯ್‌, ಜಾನಿ ಬೆಸ್ಟೋ, ಜೋ ರೂಟ್‌, ಬೆನ್ಸ್‌ ಸ್ಟೋಕ್ಸ್‌, ಜೋಸ್‌ ಬಟ್ಲರ್‌(ನಾಯಕ), ಲಿಯಾಮ ಲಿವಿಂಗ್‌ಸ್ಟೋನ್‌, ಮೊಯೀನ್ ಅಲಿ,ಕ್ರೇಗ್‌ ಓವರ್ಟನ್, ಡೇವಿಡ್ ವಿಲ್ಲಿ, ಬ್ರೈಡನ್ ಕೇರ್ಸ್, ರೀಸಿ ಟಾಪ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.