ಭಾರತ ತಂಡದ ನಾಯಕ ಶುಭಮನ್ ಗಿಲ್
ಲಂಡನ್: ಆತಿಥೇಯ ಇಂಗ್ಲೆಂಡ್ ಬಳಗದ ಮಂತ್ರಕ್ಕೇ ತಿರುಮಂತ್ರ ಹಾಕಿರುವ ಭಾರತವು ಲಾರ್ಡ್ಸ್‌ನಲ್ಲಿ ಗುರುವಾರ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುವತ್ತ ಚಿತ್ತ ನೆಟ್ಟಿದೆ.
2022ರ ಬೇಸಿಗೆಯಲ್ಲಿ ಬ್ರೆಂಡನ್ ಮೆಕ್ಕಲಂ ಅವರು ಮುಖ್ಯ ಕೋಚ್ ಆಗಿ ನೇಮಕವಾದ ದಿನದಿಂದ ಇಂಗ್ಲೆಂಡಿನ ತಂತ್ರಗಾರಿಕೆ ಬದಲಾಗಿದೆ. ಅದರ ಭಾಗವಾಗಿ ಸಪಾಟಾದ ಪಿಚ್‌ಗಳು (ಸೀಮಿತ ಓವರ್ ಕ್ರಿಕೆಟ್‌ನಲ್ಲಿರುವಂತೆ) ಸಿದ್ಧವಾಗಿವೆ. ಇಂಗ್ಲೆಂಡ್ ಟಾಸ್ ಗೆದ್ದು ಎದುರಾಳಿಗಳನ್ನು ಬ್ಯಾಟಿಂಗ್‌ಗೆ ಆಹ್ವಾನಿಸುವುದು ಕೂಡ ಈ ತಂತ್ರಗಾರಿಕೆಯ ಭಾಗವೇ ಆಗಿದೆ. ಮೊದಲು ಬ್ಯಾಟ್ ಮಾಡುವ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವುದು. ಮುನ್ನಡೆ ಪಡೆಯುವುದು. ಅಷ್ಟೊತ್ತಿಗೆ ಪಿಚ್ ಬೌಲರ್‌ಗಳಿಗೆ ನೆರವು ನೀಡುವ ಲಕ್ಷಣಗಳು ತೋರಿದಾಗ ಎದುರಾಳಿ ಬ್ಯಾಟರ್‌ಗಳ ಮೇಲೆ ಒತ್ತಡ ಹಾಕುವುದು. ಗುರಿಯನ್ನು ವೇಗವಾಗಿ ಬೆನ್ನಟ್ಟಿ ಗೆಲ್ಲುವುದು ತಂತ್ರವಾಗಿದೆ.
ಒಂದೊಮ್ಮೆ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡುವ ಪ್ರಸಂಗ ಬಂದರೂ ಬೀಸಾಟಕ್ಕೆ ಹೆಚ್ಚು ಒತ್ತು ನೀಡಿ ದೊಡ್ಡ ಮೊತ್ತ ಗಳಿಸುವತ್ತಲೇ ಚಿತ್ತ ಇಡುತ್ತದೆ. ಸ್ಕೋರ್‌ಬೋರ್ಡ್ ಒತ್ತಡದಲ್ಲಿ ವಿರೋಧಿ ತಂಡವನ್ನು ಸಿಲುಕಿಸಿ ಗುರಿಯನ್ನು ಬೆನ್ನಟ್ಟುವ ತಂತ್ರ ಅನುಸರಿಸುತ್ತದೆ. ಲೀಡ್ಸ್‌ನಲ್ಲಿ ನಡೆದಿದ್ದ ಭಾರತದ ಮೊದಲ ಪಂದ್ಯದಲ್ಲಿ 371 ರನ್‌ಗಳ ಗುರಿಯನ್ನು ನಿರಾಯಾಸವಾಗಿ ಇಂಗ್ಲೆಂಡ್ ಬೆನ್ನಟ್ಟಿ ಗೆದ್ದ ಪರಿಯೇ ಎಲ್ಲವನ್ನೂ ಹೇಳುತ್ತದೆ. ಆ ಪಂದ್ಯದಲ್ಲಿ ಭಾರತವು ಮೊದಲ ದಿನದಂದಲೂ ಬಹುತೇಕ ಅವಧಿ ಪಾರಮ್ಯ ಮೆರೆದಿತ್ತು. ತಂಡದ ಐವರು ಬ್ಯಾಟರ್‌ಗಳು ಶತಕ ಬಾರಿಸಿದ್ದರು. ಆದರೂ ಕೊನೆಯಲ್ಲಿ ಆತಿಥೇಯ ತಂಡ ಮೇಲುಗೈ ಸಾಧಿಸಿತ್ತು.
ಎಜ್‌ಬಾಸ್ಟನ್‌ನಲ್ಲಿಯೂ ಇದೇ ತಂತ್ರವನ್ನು ಮುಂದುವರಿಸಿದ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ (269) ಗಳಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ಶತಕ (161) ಹೊಡೆದರು. ಅವರ ಆಟದ ಕಾವು ಇಂಗ್ಲೆಂಡ್ ಪಡೆಯನ್ನು ಕರಗಿಸಿಬಿಟ್ಟಿತು. ಪಿಚ್‌ನಲ್ಲಿ ಬೌಲರ್‌ಗಳಿಗೆ ಯಾವ ನೆರವೂ ಇರಲಿಲ್ಲ ಮತ್ತು ಡ್ಯೂಕ್ ಚೆಂಡಿನ ಹೊಳಪು ಕೂಡ ಪರಿಣಾಮ ಬೀರುತ್ತಿರಲಿಲ್ಲ. ಆದರೆ ಭಾರತದ ವೇಗದ ಜೋಡಿ ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಭಾರತ ಐತಿಹಾಸಿಕ ಜಯಸಾಧಿಸಿತು. ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.
ಆದರೆ ‘ಕ್ರಿಕೆಟ್ ಕಾಶಿ’ ಲಾರ್ಡ್ಸ್‌ನಲ್ಲಿ ಪರಿಸ್ಥಿತಿ ವಿಭಿನ್ನವಾಗಿರುವ ಸಾಧ್ಯತೆ ಇದೆ. ಮೂರನೇ ಟೆಸ್ಟ್‌ನಲ್ಲಿ ವೇಗದ ತಾರೆ, ಭಾರತ ತಂಡಕ್ಕೆ ಜಸ್‌ಪ್ರೀತ್ ಬೂಮ್ರಾ ಮತ್ತು ಇಂಗ್ಲೆಂಡ್ ಬಳಗಕ್ಕೆ ಬಿರುಗಾಳಿ ವೇಗದ ಬೌಲರ್ ಜೋಫ್ರಾ ಆರ್ಚರ್ ಮರಳುವರು. ಬೂಮ್ರಾ ಎಜ್‌ಬಾಸ್ಟನ್‌ನಲ್ಲಿ ವಿಶ್ರಾಂತಿ ಪಡೆದಿದ್ದರು. ಜೋಫ್ರಾ 2021ರಲ್ಲಿ ಅಹಮದಾಬಾದ್ ಟೆಸ್ಟ್‌ನಲ್ಲಿ ಆಡಿದ ನಂತರ ಗಾಯಗೊಂಡು ವಿಶ್ರಾಂತಿಯಲ್ಲಿದ್ದರು. 30 ವರ್ಷದ ಬೌಲರ್ ತಮ್ಮ ಪ್ರತಾಪ ಮೆರೆಯಲು ಸಿದ್ಧರಾಗಿದ್ದಾರೆ.
ಬೂಮ್ರಾ ಮರಳುವುದು ಖಚಿತವಾಗಿರುವುದರಿಂದ ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಬಹುತೇಕ ಖಚಿತವಾಗಿದೆ. ಆಕಾಶ್ ಅವರು ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವುದರಿಂದಾಗಿ ಪ್ರಸಿದ್ಧಕೃಷ್ಣ ಅವರು ಬೆಂಚ್‌ನಲ್ಲಿ ಕೂರಬಹುದು. ಪಿಚ್ ಕ್ಯುರೇಟರ್ ಏನಾದರೂ ಅಂಗಣದ ಮೇಲೆ ಹಸಿರು ಗರಿಕೆಗಳನ್ನು ಹಾಗೆಯೇ ಉಳಿಸಿದರೆ ಆಕಾಶ್ ಅವರ ‘ದ್ವಿಮುಖ ಸ್ವಿಂಗ್’ ರಂಗೇರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಎರಡನೇ ಸ್ಪಿನ್ನರ್ ಆಗಿ ವಾಷಿಂಗ್ಟನ್ ಸುಂದರ್ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚು. ಪಂದ್ಯದ ದಿನಗಳಲ್ಲಿ ಇಲ್ಲಿಯ ವಾತಾವರಣವು ಪ್ರಖರ ಬಿಸಿಲು ಮತ್ತು ಸೆಕೆಯಿಂದ ಕೂಡಿರುವ ಸಾಧ್ಯತೆಗಳಿವೆ. ಅದರಿಂದ ಎರಡನೇ ಸ್ಪಿನ್ನರ್ ಆಡಿಸುವುದು ಸ್ವಲ್ಪ ಭಾರವಾಗಬಹುದು. ವಾಷಿಂಗ್ಟನ್ ಅವರು 10 ಟೆಸ್ಟ್‌ಗಳಲ್ಲಿ 43.50ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅಜೇಯ 96 ಅವರ ಶ್ರೇಷ್ಠ ಸ್ಕೋರ್ ಆಗಿದೆ. ತಂಡಕ್ಕೆ ಅಗತ್ಯವಿದ್ದ ಸಂದರ್ಭಗಳಲ್ಲಿ ಅವರು ಬ್ಯಾಟಿಂಗ್ ಮೂಲಕವೂ ನೆರವಾಗಿದ್ದಾರೆ.
ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್‌ಗೆ ಬರುವ ಮುನ್ನ ಪ್ರಮುಖ ಟೆಸ್ಟ್ ಸರಣಿಗಳಲ್ಲಿ ಸೋಲಿನ ಕಹಿಯುಂಡಿತ್ತು. ದಿಗ್ಗಜ ಆಟಗಾರರ ದಿಢೀರ್ ನಿವೃತ್ತಿಯಿಂದ ಅಸಮತೋಲನಗೊಳ್ಳುವ ಆತಂಕ ಎದುರಿಸಿತ್ತು. ಆದರೆ ನವನಾಯಕ ಶುಭಮನ್ ಗಿಲ್ ಅವರು ಗೆಲುವಿನ ರೂವಾರಿಯಾಗಿ ಉದಯಿಸುವ ಮೂಲಕ ತಂಡದಲ್ಲಿ ಶಕ್ತಿ ಸಂಚಲನವಾಗಿದೆ. ಇದೀಗ ಜಗತ್ತಿನ ಅತ್ಯಂತ ಪ್ರತಿಷ್ಠಿತ ಕ್ರೀಡಾ ತಾಣಗಳಲ್ಲಿ ಒಂದಾಗಿರುವ ಲಾರ್ಡ್ಸ್‌ನಲ್ಲಿ ಉಭಯ ತಂಡಗಳ ಸೆಣೆಸಾಟಕ್ಕೆ ವೇದಿಕೆ ಸಿದ್ಧವಾಗಿದೆ.
ಭಾರತ: ಶುಭಮನ್ ಗಿಲ್ (ನಾಯಕ) ರಿಷಭ್ ಪಂತ್ (ವಿಕೆಟ್‌ಕೀಪರ್/ಉಪನಾಯಕ) ಅಭಿಮನ್ಯು ಈಶ್ವರನ್ ಯಶಸ್ವಿ ಜೈಸ್ವಾಲ್ ಧ್ರುವ ಜುರೇಲ್ ಕರುಣ್ ನಾಯರ್ ಕೆ.ಎಲ್. ರಾಹುಲ್ ಸಾಯಿ ಸುದರ್ಶನ್ ರವೀಂದ್ರ ಜಡೇಜ ನಿತೀಶ್ ಕುಮಾರ್ ರೆಡ್ಡಿ ವಾಷಿಂಗ್ಟನ್ ಸುಂದರ್ ಆಕಾಶದೀಪ್ ಅರ್ಷದೀಪ್ ಸಿಂಗ್ ಜಸ್‌ಪ್ರೀತ್ ಬೂಮ್ರಾ ಕುಲದೀಪ್ ಯಾದವ್ ಮೊಹಮ್ಮದ್ ಸಿರಾಜ್ ಪ್ರಸಿದ್ಧಕೃಷ್ಣ ಶಾರ್ದೂಲ್ ಠಾಕೂರ್.
ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ) ಜೆಮಿ ಸ್ಮಿತ್ (ವಿಕೆಟ್‌ಕೀಪರ್) ಜ್ಯಾಕ್ ಕ್ರಾಲಿ ಬೆನ್ ಡಕೆಟ್ ಒಲಿ ಪೋಪ್ ಹ್ಯಾರಿ ಬ್ರೂಕ್ ಜೋ ರೂಟ್ ಕ್ರಿಸ್ ವೋಕ್ಸ್ ಬ್ರೈಡನ್ ಕಾರ್ಸ್ ಜೋಫ್ರಾ ಆರ್ಚರ್ ಶೋಯಬ್ ಬಶೀರ್.
ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.