ADVERTISEMENT

IND vs ENG 5th Test | ಇಂಗ್ಲೆಂಡ್ 284ಕ್ಕೆ ಆಲೌಟ್; ಭಾರತಕ್ಕೆ 132ರನ್ ಮುನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜುಲೈ 2022, 14:27 IST
Last Updated 3 ಜುಲೈ 2022, 14:27 IST
ಸ್ಟುವರ್ಟ್‌ ಬ್ರಾಡ್‌ ವಿಕೆಟ್ ಪಡೆದ ಮೊಹಮ್ಮದ್‌ ಸಿರಾಜ್‌ಗೆ ಸಹ ಆಟಗಾರರಿಂದ ಅಭಿನಂದನೆ (ಚಿತ್ರಕೃಪೆ: @BCCI)
ಸ್ಟುವರ್ಟ್‌ ಬ್ರಾಡ್‌ ವಿಕೆಟ್ ಪಡೆದ ಮೊಹಮ್ಮದ್‌ ಸಿರಾಜ್‌ಗೆ ಸಹ ಆಟಗಾರರಿಂದ ಅಭಿನಂದನೆ (ಚಿತ್ರಕೃಪೆ: @BCCI)   

ಎಜ್‌ಬಾಸ್ಟನ್: ಉತ್ತಮ ಬೌಲಿಂಗ್‌ ಸಂಘಟಿಸಿದ ಭಾರತದ ವೇಗಿಗಳು ಆತಿಥೇಯ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 284 ರನ್‌ಗೆ ಆಲೌಟ್‌ ಮಾಡಿದರು. ಇದರಿಂದಾಗಿ ಜಸ್‌ಪ್ರೀತ್‌ ಬೂಮ್ರಾ ನೇತೃತ್ವದ ಟೀಂ ಇಂಡಿಯಾ 132 ರನ್‌ಗಳ ಮುನ್ನಡೆ ಸಾಧಿಸಿದೆ.

ಶುಕ್ರವಾರ ಇಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ, ವಿಕೆಟ್‌ ಕೀಪರ್‌–ಬ್ಯಾಟರ್‌ ರಿಷಭ್ ಪಂತ್‌ (146) ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜ (104) ಅವರ ಸಾಹಸಮಯ ಬ್ಯಾಟಿಂಗ್‌ ಬಲದಿಂದ 416 ರನ್‌ ಕಲೆಹಾಕಿ ಆಲೌಟ್‌ ಆಗಿತ್ತು.

ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ಗೆ ನಾಯಕ ಬೂಮ್ರಾ ಆರಂಭದಲ್ಲೇ ಪೆಟ್ಟುಕೊಟ್ಟರು. ಆಗ್ರ ಕಮಾಂಕದ ಅಲೆಕ್ಸ್‌ ಲೀಸ್‌ (6), ಜಾಕ್‌ ಕ್ರಾಲಿ (9) ಮತ್ತು ಒಲಿ ಪೋಪ್ (10) ಅವರನ್ನು ಬೇಗನೆ ಪೆವಿಲಿಯನ್‌ಗೆ ಅಟ್ಟಿದರು. ಮೊಹಮ್ಮದ್‌ ಸಿರಾಜ್‌ ಮತ್ತು ಮೊಹಮ್ಮದ್‌ ಶಮಿ ಕೂಡ ಬೂಮ್ರಾಗೆ ಉತ್ತಮ ಬೆಂಬಲ ನೀಡಿದರು. ಹೀಗಾಗಿ ಈ ತಂಡ ಎರಡನೇ ದಿನದಾಟದ ಅಂತ್ಯಕ್ಕೆ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂದು 84 ರನ್‌ ಗಳಿಸಿತ್ತು.

ADVERTISEMENT

ಮೂರನೇ ದಿನ ನಾಯಕ ಬೆನ್‌ ಸ್ಟೋಕ್ಸ್‌ ಮತ್ತು ಜಾನಿ ಬೆಸ್ಟೊ 6ನೇ ವಿಕೆಟ್‌ ಪಾಲುದಾರಿಕೆಯಲ್ಲಿ 66 ರನ್‌ ಕೂಡಿಸಿ ಅಲ್ಪ ಚೇತರಿಕೆ ನೀಡಿದರು. ಆದರೆ, 25 ರನ್‌ ಗಳಿಸಿದ್ದ ಸ್ಟೋಕ್ಸ್‌, ಶಾರ್ದೂಲ್‌ ಠಾಕೂರ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೈ ಚೆಲ್ಲಿದರು.

ಬಳಿಕ ಸ್ಯಾಮ್‌ ಬಿಲ್ಲಿಂಗ್ಸ್‌ (36) ಜೊತೆ ಸೇರಿ 7ನೇ ವಿಕೆಟ್‌ಗೆ 92 ರನ್‌ ಕಲೆಹಾಕಿದ ಬೆಸ್ಟೊ ಟೆಸ್ಟ್‌ ಕ್ರಿಕೆಟ್‌ನಲ್ಲಿ 11ನೇ ಶತಕ ಸಿಡಿಸಿ ತಮ್ಮ ತಂಡಕ್ಕೆ ಆಸರೆಯಾದರು. ಬೆಸ್ಟೊ 140 ಎಸೆತಗಳಲ್ಲಿ 106 ರನ್‌ ಗಳಿಸಿ ಔಟಾದ ನಂತರ ಆಂಗ್ಲರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ.

ಭಾರತ ಪರ ಸಿರಾಜ್‌ 4 ವಿಕೆಟ್ ಉರುಳಿಸಿದರೆ, ಬೂಮ್ರಾ 3, ಶಮಿ 2 ಹಾಗೂ ಠಾಕೂರ್‌ 1 ವಿಕೆಟ್‌ ಪಡೆದರು.

ಬೂಮ್ರಾ ಪಡೆಗೆ ಆರಂಭಿಕ ಆಘಾತ
ಸದ್ಯ ಇನಿಂಗ್ಸ್‌ ಆರಂಭಿಸಿರುವಭಾರತಕ್ಕೆ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಆರಂಭದಲ್ಲೇ ಆಘಾತ ನೀಡಿದ್ದಾರೆ. ಚೇತೇಶ್ವರ ಪೂಜಾರ ಜೊತೆ ಇನಿಂಗ್ಸ್‌ ಆರಂಭಿಸಿದ ಶುಭಮನ್‌ ಗಿಲ್‌ ಕೇವಲ 4 ರನ್‌ ಗಳಿಸಿ ಮೊದಲ ಓವರ್‌ನಲ್ಲೇ ಔಟಾಗಿದ್ದಾರೆ.

ಸದ್ಯ ತಂಡದ ಮೊತ್ತ 19 ರನ್‌ ಆಗಿದ್ದು, ಪೂಜಾರ (12) ಜೊತೆಗೆ ಹನುಮ ವಿಹಾರಿ (1) ಕ್ರೀಸ್‌ನಲ್ಲಿದ್ದಾರೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.