ADVERTISEMENT

IND vs ENG 1st Test: ಊಟದ ವಿರಾಮಕ್ಕೆ ಇಂಗ್ಲೆಂಡ್ 67/2

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 9:03 IST
Last Updated 5 ಫೆಬ್ರುವರಿ 2021, 9:03 IST
ಜಸ್‌ಪ್ರೀತ್ ಬೂಮ್ರಾ
ಜಸ್‌ಪ್ರೀತ್ ಬೂಮ್ರಾ   

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಊಟದ ವಿರಾಮದ ವೇಳೆಗೆ ಬೆನ್ನು ಬೆನ್ನಿಗೆ ಎರಡು ವಿಕೆಟ್ ಕಬಳಿಸಿರುವ ಟೀಮ್ ಇಂಡಿಯಾ ತಿರುಗೇಟು ನೀಡಿದೆ.

ಊಟದ ವಿರಾಮದ ಹೊತ್ತಿಗೆ ಇಂಗ್ಲೆಂಡ್ 27 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ.

ಇಂಗ್ಲೆಂಡ್ ಆರಂಭಿಕರಾದ ರೋರಿ ಬರ್ನ್ಸ್ ಹಾಗೂ ಡಾಮಿನಿಕ್ ಸಿಬ್ಲಿ ಎಚ್ಚರಿಕೆಯಆರಂಭವೊದರಿಸಿದರು. ಇವರಿಬ್ಬರೂ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

ADVERTISEMENT

17 ಟೆಸ್ಟ್ ಪಂದ್ಯಗಳ ಬಳಿಕ ತವರಿನಲ್ಲಿ ಮೊದಲ ಪಂದ್ಯ ಆಡುತ್ತಿರುವ ಜಸ್‌ಪ್ರೀತ್ ಬೂಮ್ರಾ ಹಾಗೂ ಸುದೀರ್ಘ ಸಮಯದ ಬಳಿಕ ತಂಡಕ್ಕೆ ಪುನರಾಗಮನ ಮಾಡಿರುವ ಇಶಾಂತ್ ಶರ್ಮಾ ಪ್ರಭಾವಿ ದಾಳಿ ಸಂಘಟಿಸಿದರೂ ಆರಂಭದಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಈ ನಡುವೆ ಊಟದ ವಿರಾಮಕ್ಕೆ ಸ್ವಲ್ಪ ಮೊದಲು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಎದುರಾಳಿಗಳಿಗೆ ಮೊದಲ ಆಘಾತ ನೀಡಿದರು. ಉತ್ತಮವಾಗಿ ಆಡುತ್ತಿದ್ದ ರೋರಿ ಬರ್ನ್ಸ್ (33) ಹೊರದಬ್ಬುವಲ್ಲಿ ಯಶಸ್ವಿಯಾದರು. 60 ಎಸೆತಗಳನ್ನು ಎದುರಿಸಿದ ಬರ್ನ್ಸ್ ಎರಡು ಬೌಂಡರಿಗಳಿಂದ 33 ರನ್ ಗಳಿಸಿದರು. ಅಲ್ಲದೆ ಮೊದಲ ವಿಕೆಟ್‌ಗೆ ಡಾಮಿನಿಕ್ ಸಿಬ್ಲಿ ಜೊತೆಗೆ 63 ರನ್‌ಗಳ ಜೊತೆಯಾಟ ನೀಡಿದರು.

ಇದಾದ ಬೆನ್ನಲ್ಲೇ ಜಸ್‌ಪ್ರೀತ್ ಬೂಮ್ರಾ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದ ಡ್ಯಾನಿಯಲ್ ಲಾರೆನ್ಸ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ ಬೂಮ್ರಾ ತವರು ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಸಾಧನೆ ಮಾಡಿದರು.

ಇದೀಗ ಕ್ರೀಸಿನಲ್ಲಿರುವ ಸಿಬ್ಲಿ ಹಾಗೂ ನಾಯಕ ಜೋ ರೂಟ್ (4*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೊಂದೆಡೆ96 ಎಸೆತಗಳನ್ನು ಎದುರಿಸಿರುವ ಸಿಬ್ಲಿ ಮೂರು ಬೌಂಡರಿಗಳಿಂದ ಅಜೇಯ 26 ರನ್ ಗಳಿಸಿದ್ದಾರೆ.

ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ...
ಈ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಜೋ ರೂಟ್ ಪಾಲಿಗಿದು ಸ್ಮರಣೀಯ 100ನೇ ಟೆಸ್ಟ್ ಪಂದ್ಯವಾಗಿದೆ.

ಅಚ್ಚರಿಯೆಂಬಂತೆ ಭಾರತ ತಂಡದಲ್ಲಿ ಕುಲ್‌ದೀಪ್ ಸ್ಥಾನಕ್ಕೆ ಶಹಬಾಜ್ ನದೀಂ ಆಯ್ಕೆ ಮಾಡಲಾಗಿತ್ತು. ಇದಕ್ಕೂ ಮೊದಲು ಗಾಯಾಳು ಅಕ್ಷರ್ ಪಟೇಲ್ ಸ್ಥಾನಕ್ಕೆ ನದೀಂ ಹಾಗೂ ರಾಹುಲ್ ಚಹರ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು.

ಸುದೀರ್ಘ ಸಮಯದ ಬಳಿಕ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಭಾರತ ತಂಡವು ಮೂವರು ಸ್ಪಿನ್ನರ್‌ಗಳ ರಣತಂತ್ರಕ್ಕೆ ಮೊರೆ ಹೋಗಿದ್ದು, ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್ ಜೊತೆಗೆ ಎಡಗೈ ಸ್ಪಿನ್ನರ್ ಶಹಬಾಜ್ ನದೀಂ ಕಾಣಿಸಿಕೊಂಡಿದ್ದಾರೆ.

ಮುಂಬರುವ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಯಾರು ಆಡಲಿದ್ದಾರೆ ಎಂಬುದು ಕೂಡಾ ಇದೇ ಸರಣಿಯಲ್ಲಿ ನಿರ್ಧಾರವಾಗಲಿದೆ. ಹಾಗಾಗಿ ಪ್ರಸ್ತುತ ಸರಣಿಯು ಹೆಚ್ಚಿನ ರೋಚಕತೆ ಮನೆ ಮಾಡಿದೆ.

ಆಡುವ ಬಳಗ ಇಂತಿದೆ:

ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ ಮತ್ತು ಶಹಬಾಜ್ ನದೀಂ.

ಇಂಗ್ಲೆಂಡ್: ರೋರಿ ಬರ್ನ್ಸ್, ಡಾಮಿನಿಕ್ ಸಿಬ್ಲಿ, ಡ್ಯಾನಿಯಲ್ ಲಾರೆನ್ಸ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಒಲ್ಲಿ ಪಾಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡಾಮಿನಿಕ್ ಬೆಸ್, ಜೋಫ್ರಾ ಆರ್ಚರ್, ಜ್ಯಾಕ್ ಲೀಚ್ ಮತ್ತು ಜೇಮ್ಸ್ ಆಂಡ್ರೆಸನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.